ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಹಣ, ಸಂಪತ್ತು ಹಾಗೂ ಜಮೀನು ಇದ್ದವನಿಗೆ ಸಧ್ಯದ ಜಗತ್ತಿನಲ್ಲಿ ಬೆಲೆ ಇಲ್ಲ, ಯಾರ ಹತ್ತಿರ ವಿಧ್ಯೆ ಇದೆಯೋ ಆ ವ್ಯಕ್ತಿಗೆ ಜಗತ್ತಿನಲ್ಲಿ ಗೌರವದ ಬೆಲೆ ಇದೆ ಎಂದು ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕನಮಡಿಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ಇವರ ಸಹಯೋಗದೊಂದಿಗೆ ಮಾಣಿಕೇಶ್ವರಿ ಹಾಗೂ ಚೈತನ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವ ಮಗುವಿನಲ್ಲಿ ಯಾವ ಪ್ರತಿಭೆ ಇದೆ ಎಂದು ಶಿಕ್ಷಕರು ಗುರ್ತಿಸಬೇಕು. ಮಕ್ಕಳ ಪ್ರತಿಭೆ ಗುರ್ತಿಸಿ ಪ್ರೋತ್ಸಾಹಿಸಬೇಕು. ಪ್ರತಿಯೊಂದು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದ್ದೆ ಇರುತ್ತದೆ. ಮಕ್ಕಳನ್ನು ಎತ್ತರ ಮಟ್ಟಕ್ಕೆ ಒಯ್ಯುವ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ನಿರಂತರ ಅಧ್ಯಯನ ಮಾಡುತ್ತಾ ಇರಬೇಕು. ಆಗ ಮಕ್ಕಳ ವಿಧ್ಯೆ ಹೆಚ್ಚಾಗುತ್ತದೆ.
ಶಿಕ್ಷಕರು ಶಿಲ್ಪಿಗಳು ಇದ್ದಂತೆ, ಮಕ್ಕಳ ಪ್ರತಿಭೆ ಗುರ್ತಿಸಿದಾಗ ಜಗತ್ತೆ ಅವರನ್ನು ಗುರ್ತಿಸುತ್ತದೆ. ಜಗತ್ತಿನಲ್ಲಿ ನಮ್ಮನ್ನು ವಿಧ್ಯೆ ಗೌರವಿಸುತ್ತದೆ. ವಿಧ್ಯೆ ಬಳಸಿದಷ್ಟು ಹೆಚ್ಚಾಗುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಬಣ್ಣಿಸಿದರು.
ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಶಿಕ್ಷಕರು ಸಮಾಜ ಸುಧಾರಕರು, ಪ್ರತಿ ಶಾಲೆಯಿಂದ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಭಾಗವಹಿಸಲು ಕರೆದುಕೊಂಡು ಬಂದಿದ್ದಾರೆ. ನಿಜವಾದ ಪ್ರತಿಭೆಯನ್ನು ಈ ವೇದಿಕೆ ಮೂಲಕ ತೋರಿಸಬೇಕು. ಅನರ್ಘ್ಯ ಮುತ್ತುಗಳನ್ನು, ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟಕ್ಕೆ ಕಳಿಸಬೇಕು. ನಿಜವಾದ ಪ್ರತಿಭೆ ಹೊಂದಿರುವ ಮಕ್ಕಳನ್ನು ಗುರ್ತಿಸಿ ಮಕ್ಕಳ ಪ್ರತಿಭೆ ಅನಾವರಣಗೊಳಿಸಿ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ, ಖಜಾಂಚಿ ಜುಬೇರ ಕೆರೂರ, ನಿರ್ದೇಶಕರಾದ ಚನ್ನಯ್ಯ ಮಠಪತಿ, ಎಸ್.ಎನ್.ಬಾಗಲಕೋಟ, ನೀಜು ಮೇಲಿನಕೇರಿ, ಎಸ್.ಆರ್.ಪಾಟೀಲ ಮುಖ್ಯೋಪಾಧ್ಯಾಯ ಚಿದಾನಂದ ಅವಟಿ, ತಾಲ್ಲೂಕ ಶಿಕ್ಷಕ ಸಂಘದ ಅಧ್ಯಕ್ಷ ಎ.ಬಿ.ಧಡಕೆ, ಬಿ.ಎಸ್.ಮಠ, ಕಾರ್ಯದರ್ಶಿ ಅಶೋಕ ಭಜಂತ್ರಿ, ಸಿ.ಎಂ.ಕೊರೆ, ಎಂ.ಎಸ್.ಟಕ್ಕಳಕಿ, ಮಹಾನಿಂಗ ಜವನರ, ಉದಯ ಕೊಟ್ಯಾಳ, ಮುತ್ತು ಪೂಜಾರಿ, ನೀಲಾ ಇಂಗಳೆ, ಪುಷ್ಪಾ ಗಚ್ಚಿನಮಠ, ಜಯಶ್ರೀ ಬೆಣ್ಣಿ, ವಸಂತ ಚವ್ಹಾಣ, ಶ್ರೀಶೈಲ ಜಿಗೇರಿ, ಯಾಳವರ, ಎಂ.ಎಚ್.ತೆಲಸಂಗ ಇದ್ದರು.
ಸ್ವಾಗತವನ್ನು ಸಿ.ಎಸ್. ಅವಟಿ, ನಿರೂಪಣೆಯನ್ನು ಪ್ರಭು ಬಿರಾದಾರ, ವಂದನಾರ್ಪಣೆಯನ್ನು ಜಿ.ಟಿ.ಕಾಗವಾಡ ನೆರವೇರಿಸಿದರು.