ವಿಜಯಪುರ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೂಂಡಾಗಿರಿ ಮತ್ತು ಉಗ್ರವಾದವನ್ನು ಸಂಪೂರ್ಣ ಮಟ್ಟ ಹಾಕಲಾಗಿದೆ. ಅದೇ ರೀತಿ ಕರ್ನಾಟಕ ಬಿಜೆಪಿ ಸರ್ಕಾರ ಪಿಎಫ್‌ಐ ಮಟ್ಟ ಹಾಕುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಬುಧವಾರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಧರ್ಮ ಆಧಾರಿತವಾಗಿ ಮೀಸಲಾತಿ ಕೊಡುವ ಮನೋಭಾವ ಭಾರತದ ಹಿತಕ್ಕೆ ಮಾರಕವಾಗಿದೆ, ಧಾರ್ಮಿಕ ಆಧಾರಿತ ಮೀಸಲಾತಿ ಅಸಂವಿಧಾನಿಕ. ಹೀಗಾಗಿ ಭಾರತೀಯ ಜನತಾ ಪಕ್ಷ ಧಾರ್ಮಿಕ ಆಧಾರಿತ ಮೀಸಲಾತಿ ಯಾವತ್ತೂ ಕೊಡುವುದಿಲ್ಲ ಎಂದರು.
ವಿಶ್ವದ ದೊಡ್ಡ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ, ನಮ್ಮನ್ನಾಳಿದ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ ಎಂದರು.
ಬಸವಣ್ಣನವರ ವಿಚಾರಧಾರೆಯನ್ನು ಮನೆ-ಮನಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ, ಕರ್ನಾಟಕ-ಉತ್ತರ ಪ್ರದೇಶ ಸಾವಿರಾರು ವರ್ಷಗಳಿಂದ ಸ್ನೇಹ ಸೂತ್ರದಲ್ಲಿ ಇವೆ, ಪ್ರಧಾನಮಂತ್ರಿಯವರ ಏಕಭಾರತ ಶ್ರೇಷ್ಠ ಭಾರತ ಎನ್ನುವ ಆಶಯಕ್ಕೆ ಉತ್ತಮ ಉದಾಹರಣೆ ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧವಿದೆ ಎಂದರು.
ಕಾಂಗ್ರೆಸ್ ಕೇವಲ ತುಷ್ಟೀಕರಣಕ್ಕೆ ಆದ್ಯತೆ ನೀಡಿದೆ, ಆದರೆ ನಾವು ಪ್ರತಿಯೊಬ್ಬ ನಾಗರಿಕರನ್ನು ಸಶಕ್ತೀಕರಣ ಮಾಡಲು ಆದ್ಯತೆ ನೀಡುತ್ತೇವೆ. ಮಾಹಿತಿ ತಂತ್ರಜ್ಞಾನದ ಹೆಸರು ಬಂದಾಗ ಕರ್ನಾಟಕದ ಬೆಂಗಳೂರು ಮುಂಚೂಣಿಯಲ್ಲಿ ಕೇಳಿ ಬರುತ್ತದೆ ಎಂದು ಯೋಗಿ ಹೇಳಿದರು.
ಭೌದ್ಧಿಕ, ತಾಂತ್ರಿಕ ಶಿಕ್ಷಣದ ಕೇಂದ್ರವಾಗಿ ನವ ಭಾರತ ಮಿಂಚುತ್ತಿದೆ, ನಳಂದಾ, ತಕ್ಷಶೀಲಾ ವಿಶ್ವವಿದ್ಯಾಲಯದ ಜ್ಞಾನಪರಂಪರೆಯನ್ನು ಯುವಜನತೆ ಮೈಗೂಡಿಸಿಕೊಳ್ಳುವಂತಾಗಿದೆ, ಭೌದ್ಧಿಕ ಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ಸಾಕ್ಷಿಕರೀಸುವ ದೊಡ್ಡ ಅವಕಾಶ ಭಾರತೀಯ ಯುವಕರಿಗೆ ದೊರಕುತ್ತಿದೆ ಎಂದರು.
ಕಾAಗ್ರೆಸ್, ಜೆಡಿಎಸ್ ಎರಡು ಪಕ್ಷಗಳು ಇಭ್ಬಾಗಿಸುವವು ಹೊರತು ವಿಕಾಸಕ್ಕೆ ಆದ್ಯತೆ ನೀಡುವುದಿಲ್ಲ, ಜೆಡಿಎಸ್, ಕಾಂಗ್ರೆಸ್‌ಗೆ ನೀತಿ, ನಿಯಮ, ನಿಯತ್ತು ಇಲ್ಲ, ಯಾವ ದೃಷ್ಟಿಕೋನವೂ ಎರಡು ಪಕ್ಷಗಳಿಗೆ ಇಲ್ಲ ಎಂದು ದೂರಿದರು.
ಪ್ರತಿ ವ್ಯಕ್ತಿಗೂ ಯೋಜನೆಯಿಂದ ದೊರಕುತ್ತಿರುವ ಪ್ರಯೋಜನವೇ ಬಿಜೆಪಿಗೆ ಪ್ರೀತಿ ರೂಪದಲ್ಲಿ ಅಭಿವ್ಯಕ್ತಿಯಾಗುತ್ತಿದೆ,
ಈ ಹಿಂದೆ ಅನ್ನದಾತ ತಲೆ ತಗ್ಗಿಸಿ ನಡೆಯುತ್ತಿದ್ದ, ಆದರೆ ಕಿಸಾನ್ ಸಮ್ಮಾನ ಯೋಜನೆ ಮೂಲಕ ಪ್ರತಿಯೊಬ್ಬ ಅನ್ನದಾತನ ತಲೆ ಎತ್ತಿ ನಡೆಯುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದರು. ಜನ್‌ಧನ್, ಮಹಿಳಾ ಸಶಕ್ತೀರಣ, ವಿಮಾನ ನಿಲ್ದಾಣ – ರಸ್ತೆ, ದೊಡ್ಡ ಸಂಸ್ಥೆಗಳ ಸ್ಥಾಫನೆ ಹೀಗೆ ಅನೇಕ ಅಭಿವೃದ್ಧಿ ಪರ್ವ ಮುಂದುವರೆದಿದ್ದು ಬಜೆಟ್ ಗಾತ್ರ ಸಹ ದೊಡ್ಡದಾಗುತ್ತಾ ಸಾಗಿದೆ. ಬಿಜೆಪಿ ಸರ್ಕಾರದ ನಿಯತ್ತು ಶ್ರೇಷ್ಠವಾಗಿರುವುದರಿಂದ ಈ ಎಲ್ಲ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.
ೆಕಾAಗ್ರೆಸ್ ಕೇವಲ ಪಂಚವಾರ್ಷಿಕ ಯೋಜನೆ ಮಾತ್ರ ನೀಡಿದೆ, ಮೊದಲು ಐದು ವರ್ಷ ಯೋಜನೆ ರೂಪುರೇಷೆ, ನಂತರ ಐದು ವರ್ಷಗಳ ನಂತರ ಅನುದಾನ ಬಿಡುಗಡೆ ಆದರೆ ಆ ಪಂಚವಾರ್ಷಿಕ ಯೋಜನೆಗಳು ಅನುಷ್ಠಾನವಾಗುತ್ತಲೇ ಇರಲಿಲ್ಲ, ಆದರೆ ಮೋದಿ ನೇತೃತ್ವದ ಸರ್ಕಾರ ಶಿಲಾನ್ಯಾಸ ನೆರವೇರಿಸಿದ, ಘೋಷಣೆ ಮಾಡಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ ಎಂದರು.
ನೂತನ ಶಿಕ್ಷಣ ನೀತಿ ಅನ್ವಯ ಕನ್ನಡ ಮಾಧ್ಯಮದಲ್ಲಿಯೇ ವೈದ್ಯಕೀಯ, ಇಂಜನಿಯರಿAಗ್, ಕಾನೂನು ಅಧ್ಯಯನ ಮಾಡಬಹುದಾಗಿದೆ, ತಾಂತ್ರಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಕಲಿಯುವ ಧಿವ್ಯ ಅವಕಾಶ ನೂತನ ಶಿಕ್ಷಣ ನೀತಿಯ ಮೂಲಕ ದೊರಕಿದೆ ಎಂದರು.
ಇಂದು ಕರ್ನಾಟಕದ ಪ್ರತಿ ಮನೆಗೂ ನಳದ ಸಂಪರ್ಕವಿದೆ, ಡಬಲ್ ಇಂಜಿನ್ ಸರ್ಕಾರ ಇಂದು ಪ್ರತಿ ಮನೆಗೂ ನೀರು ತಲುಪಿಸುತ್ತಿದೆ. ಇದು ಅತ್ಯಂತ ಅಭಿನಂದನಾರ್ಹ ಕಾರ್ಯವಾಗಿದೆ ಎಂದು ಯೋಗಿ ಆದಿತ್ಯನಾಥ ಶ್ಲಾಘಿಸಿದರು
ಮಾಜಿ ಸಚಿವ ಹಾಗೂ ಬಸವನ ಬಾಗೇವಾಡಿ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಕುಚಬಾಳ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ಪ್ರಕಾಶ ಅಕ್ಕಲಕೋಟ, ಚಿದಾನಂದ ಚಲವಾದಿ ಮೊದಲಾದವರು ಪಾಲ್ಗೊಂಡಿದ್ದರು.
ಬಸವ ಜನ್ಮಭೂಮಿಗೆ ಬಂದು ಪಾವನನಾದೆ
ಕನ್ನಡದಲ್ಲಿ ಮಾತು ಆರಂಭಿಸಿದ ಯೋಗಿ ಆದಿತ್ಯನಾಥ ಅವರು, ಶ್ರೀ ಬಸವೇಶ್ವರರ ಪಾವನ ಭೂಮಿಗೆ ಭಕ್ತಿಯಿಂದ ನಮಿಸುವೆ..' ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಬಸವನ ಬಾಗೇವಾಡಿ ಅಭ್ಯರ್ಥಿ ಬೆಳ್ಳುಬ್ಬಿ ಸಾಹೇಬರು ಹಿರಿಯರು, ಅನುಭವಿಗಳು, ಕ್ಷೇತ್ರದ ಅಭಿವೃದ್ಧಿಗಾಗಿ ನೀವು ಅವರನ್ನು ಗೆಲ್ಲಿಸಬೇಕು ಎಂದು ಕನ್ನಡದಲ್ಲಿಯೇ ಮನವಿ ಮಾಡಿದ ಯೋಗಿ ಅವರು
ಜಯ ಜನನೀಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…’ ಎಂಬ ಸಾಲುಗಳನ್ನು ಉಲ್ಲೇಖಿಸಿದರು.
ಬಸವ ಜನ್ಮಭೂಮಿಗೆ ಆಗಮಿಸಿ ಪಾವನನಾಗಿದ್ದೇನೆ. ಬಸವಣ್ಣನವರ ಕೃಪಾಶೀರ್ವಾದದಿಂದ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದೇವೆ. ಬಸವಣ್ಣನವರು ಶತಶತಮಾನಗಳ ಹಿಂದೆ ಪಾರ್ಲಿಮೆಂಟ್ ರೂಪಿಸಿದ್ದರು. ಪರಿಣಾಮವಾಗಿ ಭಾರತ ವಿಶ್ವದ ದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿದೆ, ಭಾರತ ಪ್ರಜಾಪ್ರಭುತ್ವದ ಜನನಿ, ಪ್ರಜಾಪ್ರಭುತ್ವದ ಪರಿಕಲ್ಪನೆ ಉದಯಿಸಿದ ಪಾವನ ನೆಲಕ್ಕೆ ಭೇಟಿ ನೀಡಿ ನಾನು ಪಾವನನವಾಗಿರುವೆ. ಈ ಪವಿತ್ರ ನೆಲಕ್ಕೆ ಕೋಟಿ ನಮನಗಳನ್ನು ಸಮರ್ಪಿಸುವೆ ಎಂದು ಯೋಗಿ ಆದಿತ್ಯನಾಥ ಹೇಳಿದರು.
ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಸೇರಿದ್ದ ಸಹಸ್ರಾರು ಕಾರ್ಯಕರ್ತರಿಂದ ಕಾರ್ಯಕ್ರಮದುದ್ದಕ್ಕೂ ನಿರಂತರವಾಗಿ ಜೈ ಶ್ರೀರಾಮ, ಜೈ ಶ್ರೀರಾಮ, ಜೈ ಯೋಗಿ, ಭಾರತ ಮಾತಾ ಕೀ ಜೈ, ಬುಲ್ಡೋಜರ್ ಬಾಬಾ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.