ವಿಜಯಪುರ: ಬಿಜೆಪಿಯವರ ಕುತಂತ್ರದಿಂದಾಗಿ ಬಬಲೇಶ್ವರ ಮತಕ್ಷೇತ್ರದ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಅಮಾನತು ಮಾಡಲಾಗಿದ್ದು, ಅಧಿಕಾರಿಗಳು ಕೂಡಲೇ ಇವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಡ ಆಶಾ ಕಾರ್ಯಕರ್ತೆಯರಿಗೆ ಬಿಜೆಪಿಯವರು ಬಲವಂತವಾಗಿ ಶಾಲು ಹಾಕಿ, ಪೋಟೋ ಕ್ಲಿಕ್ಕಿಸಿ ಪ್ರಚಾರ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಕೂಡಲೇ ಅಧಿಕಾರಿಗಳು ಇಬ್ಬರು ಆಶಾ ಕಾರ್ಯಕರ್ತೆಯರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ತಿಳಿಸಿದ್ದಾರೆ.
ಬಬಲೇಶ್ವರದ ಬಿಜೆಪಿ ಅಭ್ಯರ್ಥಿ ಬಡವರ ಹೊಟ್ಟೆ ಮೇಲೆ ಕಾಲಿಡುವ ನಡೆ ಅನುಸರಿಸುತ್ತಿದ್ದು, ಭಗವಂತ ಬಿಜೆಪಿ ಅಭ್ಯರ್ಥಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.