ಆಮಿಷಗಳಿಗೆ ಬಲಿಯಾಗದಿರಿ | ಮೊಸಳೆ ಕಣ್ಣೀರನ್ನು ನಂಬಬೇಡಿ
ವಿಜಯಪುರ: ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು, ಕಾಲುಂಗುರ ಕಿತ್ತು ಕೊಳ್ಳುವವರನ್ನು ನಂಬಬಾರದು ಅಂಥವರು ಆಯ್ಕೆಯಾದರೆ ವಿರೋಧಿಗಳ ಜೊತೆ ಮತ ಹಾಕಿದವರೂ ಕೂಡ ಪೋಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ. ಎಂದು ಕಾಂಗ್ರೆಸ್ ಮುಖಂಡ ಚನ್ನಪ್ಪ ಕೊಪ್ಪದ ಎಚ್ಚರಿಕೆ ನೀಡಿದ್ದಾರೆ.
ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
ಶ್ರೀಮಂತ ಜಮೀನುದಾರರು ತಮ್ಮ ಹೊಲಗಳಿಗೆ ನೀರಿಲ್ಲದ ಕಾರಣ ಸಂಕಷ್ಟ ಎದುರಿಸುತ್ತಿದ್ದರು. ಕೂಲಿಗೆ ಹೋಗಲು ಪ್ರತಿಷ್ಠೆ ಅಡ್ಡಿಯಾಗಿತ್ತು. ಆದರೆ, ಈಗ ಎಂ. ಬಿ. ಪಾಟೀಲರು ಮಾಡಿರುವ ನೀರಾವರಿ ಯೋಜನೆಗಳಿಂದಾಗಿ ಉತ್ತಮ ಬೆಳೆ ಬೆಳೆಯುವಂತಾಗಿದೆ. ಇದನ್ನು ನೆನಪಿಸಿಕೊಂಡು ಎಲ್ಲರೂ ಎಂ.ಬಿ.ಪಾಟೀಲರಿಗೆ ಸಂಪೂರ್ಣ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ,
ಸುಳ್ಳು, ಮೋಸ, ಆಸೆ, ಆಮಿಷ ತೋರಿಸುವವರಿಗೆ ಮತದಾರರು ಬಲಿಯಾಗದೇ ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ಹಾಕಬೇಕು ಎಂದು ಹೇಳಿದರು.
ಮೂರು ಬಾರಿ ಜನರನ್ನು ಹೆದರಿಸಿ, ಬೆದರಿಸುತ್ತಿದ್ದವರು ಈಗ ಮೊಸಳೆ ಕಣ್ಣೀರು ಹಾಕುತ್ತ ಅಡ್ಡ ಬೀಳುವ ಮೂಲಕ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಅಂಥವರನ್ನು ನಂಬಿದರೆ ಜನರು ತಾವೇ ಕಣ್ಣೀರು ಹಾಕುತ್ತ ಕೆಲಸ ಕಾರ್ಯಗಳಿಗೆ ಅಡ್ಡ ಬೀಳುವ ದುಸ್ಥಿತಿ ಬರುತ್ತದೆ. ಇವರ ಬಗ್ಗೆ ಜಾಗೃತರಾಗಿರಬೇಕು. ಜಾತಿಯಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ನಾನು ಜಲಸಂಪನ್ಮೂಲ ಸಚಿವನಾದ ಬಳಿಕ ಕೃಷ್ಣೆ ಅಷ್ಟೇ ಅಲ್ಲ, ಕಾವೇರಿ ಭಾಗದ ನೀರಾವರಿ ಯೋಜನೆಗಳಿಗೂ ಕೆಲಸ ಮಾಡಿದ್ದೇನೆ. ಕಾರಿಗೆ ಕೆಂಪು ಲೈಟ್ ಹಾಕಿಕೊಂಡು ಮೆರವಣಿಗೆ ಮಾಡದೇ ಮನೆ, ಮಠ ಬಿಟ್ಟು ನೀರಾವರಿ ಯೋಜನೆಗಳಿಗಾಗಿ ಶ್ರಮಿಸಿದ್ದೇನೆ. ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿದ್ದರೂ ವಿಶ್ರಾಂತಿ ಪಡೆಯದೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶೆಯದಂತೆ ಬೊಗಸೆ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಮೂಲಕ ಸೂರ್ಯ- ಚಂದ್ರ ಇರುವವರೆಗೆ ಕುಟುಂಬಗಳು ಶಾಶ್ವತವಾಗಿ ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದೇನೆ. ನೂರಾರು ಎಕರೆ ಜಮೀನು ಹೊಂದಿದ್ದರೂ ನೀರಿಗಾಗಿ ಕಷ್ಟ ಪಡುತ್ತಿದ್ದ ಸಾಹುಕಾರರು ಈಗ ಉತ್ತಮ ಬೆಳೆ ಬೆಳೆಯುವ ಮೂಲಕ ನಿಜವಾಗಿ ಸಾಹುಕಾರರಾಗುವಂತೆ ಮಾಡಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿ.ಎಸ್.ಪಾಟೀಲ, ಬಿ.ಜಿ. ಬಿರಾದಾರ, ಈರಗೊಂಡ ಬಿರಾದಾರ, ಸಂಗಮೇಶ ಬಬಲೇಶ್ವರ, ಆರ್.ಎಸ್.ಕೋಟ್ಯಾಳ ಸಂಗಮೇಶ ಬೂದಿಹಾಳ, ಅಣ್ಣಾಸಾಹೆಬ ಕೋಟ್ಯಾಳ, ಶಂಕರ ಕೋಟ್ಯಾಳ, ಬಾಬು ಕೋಟ್ಯಾಳ, ಎ.ಬಿ.ಬೂದಿಹಾಳ, ಧರ್ಮಣ್ಣ ಬಿಳೂರ, ಗುರು ಜಂಗಮಶೆಟ್ಟಿ, ಹಣಮಂತ ಬಡಚಿ ಮುಂತಾದವರು ಉಪಸ್ಥಿತರಿದ್ದರು.