ಲಿಂ.ಮಲ್ಲಪ್ಪ ಸಿಂಹಾಸನ ಪುಣ್ಮಸ್ಮರಣೆ | ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಕ್ರಮ
ಬಸವನಬಾಗೇವಾಡಿ: ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲಸಂಸ್ಥಾಪಕರಾಗಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿರುವ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಸೇವೆ ಸ್ಮರಣೀಯವಾಗಿದೆ ಎಂದು ಜಯಶ್ರೀ ಮೊಕಾಶಿ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಹಮ್ಮಿಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಆಗಿನ ಕಾಲದಲ್ಲಿ ಮಾಮಲೇದಾರರಾಗಿ ಜನಪರ ಕಾರ್ಯಗಳನ್ನು ಲಿ.ಮಲ್ಲಪ್ಪ ಸಿಂಹಾಸನ ಅವರು ಮಾಡಿದರು. ಇವರ ಸೇವೆಯನ್ನು ಗುರುತಿಸಿ ಆಗಿನ ಬ್ರಿಟಿಷರ ಸರ್ಕಾರ ರಾವ್ ಸಾಹೇಬ ಎಂಬ ಸನ್ನದು ನೀಡಿ ಗೌರವಿಸಿತ್ತು. ತಮ್ಮ ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ ಬಸವೇಶ್ವರ ದೇವಾಲಯ ಸಂಸ್ಥೆಯನ್ನು ಸ್ಥಾಪಿಸಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. ಜನರ ವಂತಿಗೆ ಹಣ ಸಂಗ್ರಹಿಸಿ ದೇವಾಲಯದ ಸುತ್ತಲಿನ ಪರಿಸರ, ದೇವಾಲಯದ ಜೀರ್ಣೋದ್ಧಾರ ಕಾರ್ಯಕೈಗೊಳ್ಳುವ ಮೂಲಕ ಮನದ ಸೇವೆ ಸಲ್ಲಿಸಿದರು. ಇವರ ಕಾರ್ಯವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಮಾಡಬೇಕಿದೆ. ಇವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಆಚರಣೆಗೆ ತರುವಲ್ಲಿ ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಅವರ ಕಾರ್ಯ ಶ್ಲಾಘನೀಯ ಎಂದರು.
ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿ, ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲಸಂಸ್ಥಾಪಕರಾದ ಲಿಂ.ಮಲ್ಲಪ್ಪ ಸಿಂಹಾಸನ ಅವರ ಸೇವೆ ಯಾರೂ ಮರೆಯಬಾರದು. ಅವರ ಸಲ್ಲಿಸಿದ ಸೇವೆಯಿಂದಾಗಿ ಬಸವೇಶ್ವರ ದೇವಾಲಯ ಜೀರ್ಣೋದ್ಧಾರವಾಯಿತು. ಇವರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಮಾಡಲು ಮೊದಲು ನಂದಿ ಸಾಹಿತ್ಯ ವೇದಿಕೆಯಿಂದ ೨೦೧೧ ರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ತದನಂತರ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಪತ್ರ ಬರೆದು ಮಂಡಳಿಯ ವಾರ್ಷಿಕ ಕಾರ್ಯಕ್ರಮದ ಪಟ್ಟಿಯಲ್ಲಿ ಇದನ್ನು ಹಾಕುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಮಂಡಳಿಯ ಅಽಕಾರಿಗಳು ಪ್ರತಿವರ್ಷ ಇವರ ಪುಣ್ಯಸ್ಮರಣೆಯನ್ನು ಮಾಡುತ್ತಾ ಬರುತ್ತಿದೆ. ಈ ವರ್ಷ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವದರಿಂದಾಗಿ ಕಾರ್ಯಕ್ರಮ ಸರಳವಾಗಿ ಆಚರಣೆಯಾಗುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಸಮಾಜ ಸುಧಾರಣೆ, ಸಾಮಾಜಿಕ ಕಾರ್ಯ ಮಾಡಿರುವ ಮಹಾತ್ಮರನ್ನು ಎಂದಿಗೂ ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಅವರ ಜಯಂತಿ, ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಎಲ್ಲರೂ ಸಮಾನರಾಗಿ ಕೂಡಿಕೊಂಡು ಆಚರಣೆ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಮಹಾತ್ಮರ,ಸಂತರ ಸಂದೇಶಗಳನ್ನು ಅರಿತು ಜೀವನ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ದೇವಾಲಯ ಇಂಟರ್‌ನ್ಯಾಷನಲ್ ಸ್ಕೂಲಿನ ಉಪಪ್ರಾಚಾರ್ಯ ಎಸ್.ಎಂ.ಬಿಸ್ಟಗೊಂಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಂಗಪ್ಪ ಬೇವನೂರ ಉಪಸ್ಥಿತರಿದ್ದರು.
ಎಸ್.ಎಸ್.ಹಡಪದ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಎಸ್.ಬಿ.ಮುತ್ತಗಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರದ ದೇವಸ್ಥಾನದ ಹೊರಆವರಣದಲ್ಲಿರುವ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.