ವಿಜಯಪುರ: ಬಬಲೇಶ್ವರ ಮತಕ್ಷೇತ್ರದ 20 ಜನವಸತಿ ಪ್ರದೇಶಗಳಿಗೆ ಜಲ ಜೀವನ್ ಮಿಷನ್(ಜೆಜೆಎಂ)ನಡಿ ಕುಡಿಯಲು ನದಿ ನೀರನ್ನು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕಾತ್ರಾಳ, ಹಣಮಸಾಗರ, ಹೊಸೂರ, ಜಂಬಗಿ, ಚಿಕ್ಕಗಲಗಲಿ ಗ್ರಾಮಗಳಲ್ಲಿ ಅವರ ಪ್ರಚಾರ ಕೈಗೊಂಡ ಅವರು ಕಾತ್ರಾಳ ಹಳ್ಳಿ ಮುತ್ಯಾನ ವಸ್ತಿ ಮತ್ತು ಕಾತ್ರಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಈ ಭಾಗದ ಜನ ಶ್ರಮಜೀವಿಗಳು, ಈ ಮುಂಚೆ ನೀರಿಲ್ಲದ ಕಾರಣ ಗುಳೆ ಹೋಗುತ್ತಿದ್ದರು. ಈಗ ಈ ಭಾಗದಲ್ಲಿ ಕೆರೆಗಳು ತುಂಬಿವೆ. ನೀರಾವರಿ ಯೋಜನೆಗಳಿಂದಾಗಿ ಈ ಗ್ರಾಮಕ್ಕೆ ಅಂಟಿದ್ದ ಕುಗ್ರಾಮ ಹಣೆಪಟ್ಟಿ ತೊಲಗಿದೆ. ಇಲ್ಲಿ ಈಗ 80 ಸಾವಿರ ಟನ್ ಕಬ್ಬು ಬೆಳೆಯಲಾಗುತ್ತಿದ್ದು, ಕೃಷಿ ಕಾರ್ಮಿಕರಿಗೆ ಉತ್ತಮ ಕೂಲಿ ಸಿಗುತ್ತಿದೆ. ಇಲ್ಲಿನ ಜನ ಸದಾ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ, ಅಭಿವೃದ್ದಿಯತ್ತ ದಾಪುಗಾಲು ಹಾಕಿದ್ದಾರೆ. ಇದು ಶಾಸಕನಾದ ನನಗೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
ನಾವು ಜನರಿಗೆ ನೀರು ಮತ್ತು ಹಾಲು ಕೊಡುತ್ತೇವೆ. ಹೈನುಗಾರಿಕೆ, ಗುಡಿ ಕೈಗಾರಿಕೆ, ಫುಡ್‍ಪಾರ್ಕ ಸ್ಥಾಪಿಸುವ ಮೂಲಕ ರೈತರು, ಮಹಿಳೆಯರು ಮತ್ತು ಯುವಕರ ಆದಾಯ ಹೆಚ್ಚಿಸಲು ಹಾಗೂ ಸ್ವಾವಲಂಬಿ ಜೀವನ ಸಾಗಿಸಲು ಯೋಜನೆ ರೂಪಿಸಿದ್ದೇವೆ. ಆದರೆ, ವಿರೋಧಿಗಳು ಅನುಕಂಪ ಗಿಟ್ಟಿಸಲು ಮೊಸಳೆ ಕಣ್ಣೀರು ಸುರಿಸುತ್ತ, ಅಡ್ಡಲಾಗಿ ಸ್ರಾಷ್ಟಾಂಗ ನಮಸ್ಕಾರ ಮಾಡುವ ಹೊಸ ನಾಟಕ ಆರಂಭಿಸಿದ್ದಾರೆ. ಮಹಿಳೆಯರ ಸಬಲಿಕರಣಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರಕಾರ ಮಹಿಳಾ ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿತ್ತು. ಆದರೆ, ಈಗ ವಿರೋಧಿಗಳು ಮಹಿಳಾ ಸ್ವ-ಸಹಾಯ ಸಂಘಗಳ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ನಾಲ್ಕು ವರ್ಷ ಇವರದೇ ಸರಕಾರದಲ್ಲಿ ಸಾಲವನ್ನು ಯಾಕೆ ಮನ್ನಾ ಮಾಡಲಿಲ್ಲ? ಈಗ ಮೊಸಳೆ ಕಣ್ಣೀರು ಹಾಕಿ ಎಲೆಕ್ಷನ್ ಮುಗಿದ ಮೇಲೆ ಜನರು ಕಣ್ಣೀರು ಹಾಕುವಂತೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಡಬಲ್ ಎಂಜಿನ್ ಸರಕಾರ ಏಜೆಂಟರು ಮತ್ತು ಉದ್ಯಮಿಗಳ ಪರ ನೀತಿಯನ್ನು ಅನುಸರಿಸುತ್ತಿದ್ದರೆ. ಕಾಂಗ್ರೆಸ್ ಮಾತ್ರ ರೈತರು, ಮಹಿಳೆಯರು, ಯುವಕರು ಮತ್ತು ಸರ್ವಜನರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿ ಬೆಲೆ ಏರಿಕೆ ಮೂಲಕ ಜನರ ಹಿತ ಕಡೆಗಣಿಸುತ್ತಿದ್ದರೆ. ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಗಳನ್ನು ಘೋಷಿಸುವ ಮೂಲಕ ಜನ ಸಾಮಾನ್ಯರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ನಮ್ಮದು ಜನಸಾಮಾನ್ಯರ ಸರಕಾರವಾಗಿದ್ದರೆ, ವಿರೋಧಿಗಳದ್ದು ದಲ್ಲಾಳಿಗಳು ಮತ್ತು ಉದ್ಯಮಿಗಳ ಪರ ಸರಕಾರವಾಗಿದೆ ಎಂದು ಎಂ. ಬಿ. ಪಾಟೀಲರು ಹೇಳಿದರು.
ಮುಖಂಡರಾದ ಬಾಪುಗೌಡ ಪಾಟೀಲ ಶೇಗುಣಸಿ ಮಾತನಾಡಿ, ಎಂ. ಬಿ. ಪಾಟೀಲರ ನೀರಾವರಿ ಯೋಜನೆಗಳಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಕ್ರಾಂತಿಯಾಗಿದೆ. 1500 ಅಡಿ ಕೊರೆದರು ನೀರು ಬಾರದ ಬೋರವೆಲ್‍ಗಳಲ್ಲಿ ಈಗ ಕೇವಲ 50 ರಿಂದ 100 ಅಡಿ ಬೋರವೆಲ್ ಕೊರೆದರೆ ನೀರು ಸಿಗುತ್ತಿದೆ. ಬತ್ತಿದ ಕೊಳವೆ ಭಾವಿಗಳು ಅಂತರ್ಜಲ ಹೆಚ್ಚಳದಿಂದ ಪುನಶ್ಚೇತನಗೊಂಡಿವೆ. ನೀರಾವರಿಗೆ ಪೂರಕವಾಗಿ ಹೊಸದಾಗಿ ವಿದ್ಯುತ್ ವಿತರಣ ಕೇಂದ್ರಗಳನ್ನು ಆರಂಭಿಸಿದ್ದಾರೆ. ಆಂಧ್ರ ಪ್ರದೇಶ ಮಾದರಿಯಲ್ಲಿ ಪ್ರತಿ 10 ಕಿ.ಮೀ ವ್ಯಾಪ್ತಿಗೊಂದರಂತೆ ವಿದ್ಯುತ್ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದ್ದಾರೆ. ನಮ್ಮ ಮುಂದಿನ ಬದುಕು ಸಮೃದ್ಧವಾಗಿರಲು ಮತ್ತು ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಎಂ. ಬಿ. ಪಾಟೀಲರನ್ನು ಬಾರಿ ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಡಿ.ಗುಗ್ಗರಿ, ಜಕ್ಕಪ್ಪ ಯಡವೆ, ಅಪ್ಪುಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಪ್ರಕಾಶ ಸೊನ್ನದ, ಬಿ. ಎಚ್. ಮುಂಬಾರೆಡ್ಡಿ, ಮುತ್ತಪ್ಪ ಶಿವಣ್ಣವರ, ಗುರುಬಸು, ಮಲ್ಲಪ್ಪ ಕೆಂಪವಾಡ, ಮಂಜು ನರಳಿ, ಬಾಳು ಪಡಸಲಗಿ, ಬಸಪ್ಪಗೌಡ ಬಿರಾದಾರ, ಹನಮಂತ ಗಲಗಲಿ ಮುಂತಾದವರು ಉಪಸ್ಥಿತರಿದ್ದರು.