ಹಿಂದೂ-ಮುಸ್ಲೀಂರ ನಡುವೆ ಕಂದಕ ಸೃಷ್ಟಿಸಲು ಬಿಜೆಪಿ ಯತ್ನ | ಬಿಜೆಪಿಯದು ದುರುದ್ದೇಶದ ಹೋರಾಟ | ಸಚಿವ ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಹಿಂದೂ- ಮುಸ್ಲೀಂರ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಹಿಂದೂಗಳು ಹಾಗೂ ರೈತರ ಬಗ್ಗೆ ನಿಜವಾದ ಕಳಕಳಿಯೇ ಇಲ್ಲ. ಬಿಜೆಪಿಯದು ದುರುದ್ದೇಶದ ಹೋರಾಟವಾಗಿದೆ.
ವಕ್ಫ್ ಕಾಯ್ದೆ ರದ್ದತಿಗೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅರ್ಧಕ್ಕೆ ತಮ್ಮ ಹೋರಾಟವನ್ನು ಏಕೆ ನಿಲ್ಲಿಸಿದರು? ಗೆಜೆಟ್ ನೋಟಿಫಿಕೇಶನ್ ರದ್ದಾಗುವವರೆಗೆ ಹೋರಾಟ ಮುಂದುವರೆಸಬಹುದಿತ್ತಲ್ಲ. ಬಹುಶಃ ಸೊಳ್ಳೆಯ ಕಾಟದಿಂದಾಗಿ ಹೋರಾಟ ನಿಲ್ಲಿಸಿರಬಹುದು ಎಂದು ವ್ಯಂಗ್ಯವಾಡಿದರು.
ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯೇ ವಕ್ಫ್ ಬಗ್ಗೆ ಅಪಾರವಾದ ಕಾಳಜಿ ತೋರಿಸಿದೆ. ವಕ್ಫ್ ಗೆ ಸಂಬಂಧಿಸಿದಂತೆ ಮ್ಯಾಪಿಂಗ್, ನೋಟಿಫಿಕೇಶನ್, ಗಣಕೀಕರಣ, ಇಂಡೀಕರಣ, ಹಲವಾರು ಸುತ್ತೋಲೆಗಳನ್ನು ಹೊರಡಿಸಿದ್ದೇ ಬಿಜೆಪಿ. ವಕ್ಫ್ ಎನ್ನುವುದು ಬಿಜೆಪಿಯ ಕೊಡುಗೆ. ಹಿಂದೆ ಏನೆಲ್ಲ ಮಾಡಿದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ಹಾಗಂತ ನಾನು ವಕ್ಫ್ ಪರವಾಗಿ ಮಾತನಾಡುತ್ತೇನೇ ಅಂತಲ್ಲ. ವಕ್ಫ್ ನಿಂದಲೂ ಸಾಕಷ್ಟು ತಪ್ಪುಗಳಾಗಿವೆ. ಈ ತಪ್ಪನ್ನು ಸ್ವತ: ನಮ್ಮ ಸರಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಬೇರೆ-ಬೇರೆ ಜಿಲ್ಲೆಗಳಲ್ಲಿ ರೈತರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಲು ಕ್ರಮವಹಿಸಿದೆ. ನಾವು ಅನ್ಯಾಯವನ್ಮು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ರೈತರ, ಮಠಮಾನ್ಯಗಳ ಹಾಗೂ ಯಾವುದೇ ಧರ್ಮದವರ ಒಂದೇ ಒಂದಿಂಚು ಜಮೀನು ವಕ್ಫ್ ಗೆ ಸೇರಲು ಬಿಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
74 ರ ಗೆಜೆಟ್ ನೋಟಿಫಿಕೇಶನ್ ರದ್ದಾಗುವವರಗೆ ಬಿಜೆಪಿ ಹೋರಾಟ ಮಾಡಲಿ. ಬಸನಗೌಡರು ಮತ್ತೆ ಟೆಂಟ್ ಹಾಕಿ ಹೋರಾಟ ಮುಂದುವರೆಸಲಿ. ನಾನೇ ಸ್ವತ: ಆ ಟೆಂಟ್ ಗೆ ಹೋಗಿ ಮಾತನಾಡಿ ಜನತೆಗೆ ನಿಜಾಂಶ ತಿಳಿಸುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಡಾ. ಗಂಗಾಧರ ಸಂಬಣ್ಣಿ, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಹೊಸ ರೀತಿಯ ಜಿಹಾದ್ :ಜೋಶಿ
ಬಳ್ಳಾರಿ: ರೈತರಿಗೆ, ಮಠ-ಮಂದಿರಗಳಿಗೆ ಸೇರಿದ ಜಮೀನುಗಳ ಮಾಲೀಕತ್ವವನ್ನು ಕಬಳಿಸಲು ವಕ್ಫ್ ಬೋರ್ಡ್ ಮೂಲಕ ರಾಜ್ಯದಲ್ಲಿ ಹೊಸ ರೀತಿಯ “ಜಿಹಾದ್” ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶುಕ್ರವಾರ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ, ಕಾಂಗ್ರೆಸ್ ಸರ್ಕಾರದ ಮುಸ್ಲಿಮರ ತುಷ್ಟೀಕರಣ ಮತ್ತಷ್ಟು ಹೆಚ್ಚುತ್ತಿದೆ. ಅಲ್ಪಸಂಖ್ಯಾತರ ಓಲೈಕೆಯೇ ತನ್ನ ಗುರಿಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದರು.
“ರಾಜ್ಯದಾದ್ಯಂತ ವಕ್ಫ್ ಮೂಲಕ ಹೊಸ ರೀತಿಯ ಜಿಹಾದ್ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರ ನಡವಳಿಕೆಯನ್ನು ನೋಡಿದರೆ ಅವರು ಕಪಟಿಗಳು” ಎಂದು ಜೋಶಿ ವಾಗ್ದಾಳಿ ನಡೆಸಿದರು.