ವಿಜಯಪುರ: ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ವ್ಯಾಪಕವಾಗಿ ದುಡ್ಡು ಮತ್ತು ಸಾರಾಯಿ ಹಂಚುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿಸಂ ಮತ್ತು ಹೊಡಿಬಡಿ ಸಂಸ್ಕೃತಿ ತಲೆದೋರಿದ್ದು ಬ್ರಿಟಿಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಬಲೇಶ್ವರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಗಂಭೀರ ಆರೋಪ ಮಾಡಿದರು.
ಮಂಗಳವಾರ ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೇ ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.
ವಿರೋಧಿ ಅಭ್ಯರ್ಥಿಗಳು ನನ್ನನ್ನು ಖರೀಧಿ ಮಾಡುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನನ್ನನ್ನು ಖರೀಧಿ ಮಾಡುವ ಗಂಡಸು ಇನ್ನೂ ಹುಟ್ಟಿಲ್ಲ ಎಂದ ಅವರು, ನನ್ನ ವಿರುದ್ಧ ಅಪಪ್ರಚಾರ ಮಾಡಲು, ಹೆದರಿಸಲು ಬೆಂಗಳೂರು ಸೇರಿದಂತೆ ಇತರೆಡೆಗಳಿಂದ ನೂರಾರು ಜನರನ್ನು ಕರೆಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಬ್ಬರೂ ವಿಜಯಪುರ ನಗರಕ್ಕೆ ಸಂಬಂಧಿಸಿದವರಾಗಿದ್ದು ಅಲ್ಲಿಯೇ ನೆಲೆಸಿದ್ದಾರೆ. ಅವರೊಂದಿಗೆ ರೌಡಿಶೀಟರುಗಳ ಸಂಪರ್ಕವಿದ್ದು ನನ್ನ ಜೀವಕ್ಕೇನಾರೂ ಅಪಾಯ ಒದಗಿದರೆ ಅದಕ್ಕೆ ಎಂ.ಬಿ. ಪಾಟೀಲ ಮತ್ತು ವಿಜುಗೌಡ ಪಾಟೀಲರೇ ನೇರ ಹೋಣೆಗಾರರಾಗುತ್ತಾರೆ ಎಂದು ಆರೋಪಿಸಿದರಲ್ಲದೇ ಪೊಲೀಸ್ ಇಲಾಖೆ ತಮಗೆ ರಕ್ಷಣೆ ಒದಗಿಸಬೇಕೆಂದು ಕೋರಿದರು.
ಕ್ಷೇತ್ರದಲ್ಲಿ ಭಯದ ವಾತಾವರಣವಿದೆ. ನನ್ನ ವಿರೋಧಿ ಅಭ್ಯರ್ಥಿಗಳ ಬಣ್ಣ ಬಯಲು ಮಾಡದೆ ನಾನು ಬಿಡೋದಿಲ್ಲ. ಈ ಸತ್ಯದ ಹೋರಾಟದಲ್ಲಿ ನನ್ನ ಜೀವ ಹೋದರೂ ಪರವಾಗಿಲ್ಲ ನಾನು ಹೆದರದೆ, ಹಿಂಜರಿಯದೇ ನನ್ನ ಹೋರಾಟ ಮುಂದುವರಿಸುವೆ. ರೈತನಾಗಿ, ನಾನು ರಾಜಕಾರಣ ಮಾಡಬಾರದೇ ಎಂದು ಪ್ರಶ್ನಿಸಿದ ಅವರು, ಎದುರಾಳಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಒಂದು ಓಟಿಗೆ ಐದು ಸಾವಿರ ರೂ ಹಂಚಲೂ ಹಿಂಜರಿಯುವುದಿಲ್ಲ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ಚುನಾವಣೆಯಲ್ಲಿ ಗೆಲ್ಲಲು ನೀರಿನಂತೆ ಖರ್ಚು ಮಾಡಲು ಹೊರಟಿದ್ದಾರೆ. ಚುನಾವಣೆ ಆಯೋಗದ ಖರ್ಚಿನ ಮಿತಿ ಒಟ್ಟು 40ಲಕ್ಷ ರೂ.ಗಳಿದ್ದರೆ ಇವರ ಚುನಾವಣೆ ವೆಚ್ಚ ಒಂದು ದಿನಕ್ಕೆ 40ಲಕ್ಷ ರೂ. ಮಿರುತ್ತಿದೆ. ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕೆAದು ಆಗ್ರಹಿಸಿದರು.
ಕ್ಷೇತ್ರದಲ್ಲಿ ನನಗೆ ಇತರೆ ಸಮಾಜಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಮೂಲ ಸೌಕರ್ಯಗಳಿಂದ ಬಳಲುತ್ತಿರುವ ಕ್ಷೇತ್ರದ ಜನತೆ, ಸಾಮಾನ್ಯ ರೈತನಾದ ನನ್ನ ಗೆಲುವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದೆ. ಬಬಲಾದಿ ಸದಾಶಿವ ಮುತ್ಯಾನ ಆಣೆ ಮಾಡಿ ಹೇಳುವೆ; ನಾನು ಪ್ರಾಮಾಣಿಕ ರಾಜಕಾರಣ ಮಾಡುತ್ತ ಚುನಾವಣೆ ಎದುರಿಸುತ್ತಿರುವೆ. ಕ್ಷೇತ್ರದ ಅಲ್ಪಸಂಖ್ಯಾತರು ನನ್ನೊಟ್ಟಿಗೆ ನಿಂತಿದ್ದಾರೆ. ಬಿಜೆಪಿ ಅಭ್ಯರ್ಥಿ ಹೋದಲ್ಲೆಲ್ಲ ಕಣ್ಣೀರು ಸುರಿಸುತ್ತಿದ್ದರೂ ಜನ ಅವರನ್ನು ನಂಬುತ್ತಿಲ್ಲ. ಕಾಗೆ ಕಾಶಿಗೆ ಹೋಗಿ ಬಂದ ಮಾತ್ರಕ್ಕೆ ಅದು ಕೋಗಿಲೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ನಮ್ಮ ನಾಯಕ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನಪರ ಯೋಜನೆಗಳು ಹಾಗೂ ಪಂಚರತ್ನ ಯೋಜನೆಗಳನ್ನು ಮತದಾರರು ಮೆಚ್ಚಿಕೊಂಡಿದ್ದು ತಾವು 20ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವುದಾಗಿ ಬಸವರಾಜ ಹೊನವಾಡ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ತಿಕೋಟಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲಸಾಬ ಉಮರಾಣಿ ಮಾತನಾಡಿ, ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು, ನಮ್ಮ ಅಭ್ಯರ್ಥಿ ಸ್ಥಳೀಯರಾಗಿದ್ದು, ವಿರೋಧಿಗಳ ಸಂಪತ್ತಿಗೆ ಸವಾಲ್ ಹಾಕಿ ಗೆಲುವು ಸಾಧಿಸಲಿದ್ದಾರೆ ಎಂದರು.
ಜೆಡಿಎಸ್ ತಿಕೋಟಾ ತಾಲೂಕಾಧ್ಯಕ್ಷ ಶಂಕರ ಹಾಲಳ್ಳಿ, ಕ್ಷೇತ್ರದ ತಾಲೂಕಾಧ್ಯಕ್ಷ ಶಿವಾಜಿ ಸಿಂಗಾಡಿ, ಪದಾಧಿಕಾರಿಗಳಾದ ರಮಜಾನ ಜಮಾದಾರ, ಬೀರಪ್ಪ ಟಕ್ಕಳಕಿ ಸೇರಿದಂತೆ ಹಲವರಿದ್ದರು.
Related Posts
Add A Comment