ಸ್ನೇಹಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮ | ಸಾಹಿತಿ, ಪ್ರಾಧ್ಯಾಪಕ ಡಾ. ಯಶವಂತ ಕೊಕ್ಕನವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಂದಿನ ವಿದ್ಯಾರ್ಥಿ-ಶಿಕ್ಷಕರ ಮನಸ್ಸುಗಳು ವಾಣಿಜ್ಯಕರಣಗೊಂಡ ಪರಿಣಾಮ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಮಮತೆಯಿಲ್ಲ, ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಗೌರವವಿಲ್ಲದಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಜಮಖಂಡಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ. ಯಶವಂತ ಕೊಕ್ಕನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಭಾ ವೇದಿಕೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ನೇಹಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಜ್ಞಾನದಿಂದ ಮಾತ್ರ ಜಗತ್ತು ಗೆಲ್ಲಲು ಸಾದ್ಯವಿಲ್ಲ ಜ್ಞಾನದೊಂದಿಗೆ ಪ್ರೀತಿಸುವ ಹೃದಯ ಬೇಕು, ಇಂದು ಹೃದಯಕ್ಕೆ ಶಿಕ್ಷಣ ನೀಡದ ಪರಿಣಾಮ ತಂದೆ, ತಾಯಿ, ಗುರುವಿನ ಮೇಲಿನ ಗೌರವ ಕಡಿಮೆಯಾಗುತ್ತಿದೆ ಇದಕ್ಕೆ ಬಯಸಿ ವೃತ್ತಿ ಆಯ್ಕೆಮಾಡಿಕೊಳ್ಳದೆ ಅನಿವಾರ್ಯವಾಗಿ ಶಿಕ್ಷಕರಾದವರೇ ಹೆಚ್ಚಾಗಿರುವುದರ ಪರಿಣಾಮ ಸಮತೋಲನದ ಶಿಕ್ಷಣ ಮಾಯವಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ಶಿಕ್ಷಣದ ಮೌಲ್ಯ ಕುಸಿಯುತ್ತಿದ್ದು ಮಕ್ಕಳು ವಿದ್ಯಾರ್ಥಿಜೀವನದಲ್ಲಿಯೇ ದುಶ್ಚಟಗಳಿಗೆ ಬಲಿಯಾಗುತಿದ್ದಾರೆ, ಪಾಲಕ, ಶಿಕ್ಷಕರು ಈ ಕುರಿತು ಗಂಭೀರವಾಗಿ ಯೋಚಿಸುವ ಆವಶ್ಯಕತೆಯಿದೆ ಎಂದರು.
ಶಿಕ್ಷಕ ಶಶಿಕಾಂತ ಅಗಸರ ಪ್ರಾಸ್ತಾವಿಕವಾಗಿ ಮಾತನಾಡಿದರು, ನಿವೃತ್ತ ಶಿಕ್ಷಕಾದ ಎಂ.ಡಿ ವಾಲಿ, ಬಿ.ಸಿ. ಪೂಜೇರಿ, ಡಾ. ಸಿದ್ದು ಧಡೂತಿ, ಗುರುಮೂರ್ತಿ ಬರಗಲ್, ಅಂಜನಾ ಕತ್ತಿ, ಭಾರತಿ ಗೋವಿಂದಗೋಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಓಂಕಾರ ಮಹಾರಾಜರು ಸಾನಿಧ್ಯವಹಿಸಿದ್ದರು, ಅಧ್ಯಕ್ಷತೆಯನ್ನು ಹಣಮಂತ ಬಸಪ್ಪಾ ಪಾಟೀಲ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಮೈತ್ರಾದೇವಿ ಜಿಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯೆ ಶ್ರೀಮತಿ ಮಾಲಾ ಹೊಸಮನಿ, ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾದ್ಯಾಯ ಎಸ್.ಎ. ಬಿರಾದಾರ ಆಗಮಿಸಿದ್ದರು ಇದೇ ಸಂಧರ್ಬದಲ್ಲಿ ಶ್ರೀಗಳು ಹಾಗೂ ಕಲಿಸಿದ ಗುರುಗಳಿಗೆ ಹೂಮಳೆಯೊಂದಿಗೆ ಸ್ವಾಗತಿಸಿ ಗುರುವಂದನೆ ಸಲ್ಲಿಸಲಾಯಿತು.
ಗೀತಾ ಧಡೂತಿ ಸ್ವಾಗತಿಸಿದರು, ಶಿಕ್ಷಕ ಪ್ರಕಾಶ ಪೂಜಾರಿ ನಿರೂಪಿಸಿದರು, ಉಪನ್ಯಾಸಕ ಪ್ರಕಾಶ ಬಡಿಗೇರ ವಂದಿಸಿದರು.

