ಚಡಚಣ: ಪಕ್ಷ ಗುರುತಿಸಿ ನಾಗಠಾಣ ಮತಕ್ಷೇತ್ರದ ಬಡವ ಹಾಗೂ ಸಾಮಾನ್ಯ ಬಿಜೆಪಿ ಕಾರ್ಯಕರ್ತ ಸಂಜೀವ ಐಹೊಳ್ಳಿ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಅವರ ಗೆಲುವಿನ ಮೇಲೆ ನನ್ನ ಹಾಗೂ ಕಾರಜೋಳ ಭವಿಷ್ಯ ನಿಂತಿದೆ. ಆದ್ದರಿಂದ ನಾವೆಲ್ಲರೂ ಅಭ್ಯರ್ಥಿಗಿಂತ ಪಕ್ಷ ಮುಖ್ಯ ಎಂದುಕೊಂಡು ಬಿಜಿಪಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿಕೊಂಡರು.
ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿ ಚುನಾವಣೆ ನಿಮಿತ್ಯ ಪ್ರಾರಂಭಿಸಿದ ಬಿಜೆಪಿ ಕಚೇರಿ ಉದ್ಘಾಟಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನು ಯಾವುದೇ ತಪ್ಪು ಮಾಡಿಲ್ಲ.ನನ್ನದೂ ಸೇರಿದಂತೆ ಹಲವಾರು ಆಕಾಂಕ್ಷಿಗಳ ಹೆಸರು ಕೇಳಿ ಬಂದಿತ್ತು. ಪಕ್ಷದ ತತ್ವ ಸಿದ್ದಾಂತದಂತೆ ಕೊನೇ ಕ್ಷಣದಲ್ಲಿ ಪಕ್ಷದ ಮುಖಂಡರಿಂದ ದೂರವಾಣಿ ಕರೆ ಬಂತು, ಅವರು ಯಾರಾದರೂ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ಹೆಸರು ಸೂಚಿಸು ಅಂದಾಗ ನನಗೆ ಹಾಗೂ ಮುಖಂಡರಿಗೆ ಹೊಳೆದಿದ್ದು ಅಗರಖೇಡ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ಸೌಮ್ಯ ಸ್ವಭಾವದ ವ್ಯಕ್ತಿ ಸಂಜೀವ ಐಹೊಳ್ಳಿ. ಅವರ ಹೆಸರು ಪಕ್ಷ ಫೈನಲ್ ಮಾಡಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪ್ರಧಾನಿ ನರೇಂದ್ರ ಮೋದಿಜಿ ಅವರು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಒದಗಿಸಿಕೊಟ್ಟಿದ್ದಾರೆ. ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ನಾವೆಲ್ಲರೂ ಸೇರಿ ಜಯಶಾಲಿಯಾಗಲು ಶ್ರಮಿಸುತ್ತೇವೆ ಎಂದ ಅವರು, ಬಡವರು ಶಾಸಕರಾಗಬಾರದಾ? ಕೇವಲ ಶಾಸಕರ, ಸಂಸದರ ಮಕ್ಕಳಷ್ಟೇ ಶಾಸಕರಾಗಬೇಕಾ? ನೀವೇ ಹೇಳಿ ಎಂದರು.
ನಾನು, ಗೋಪಾಲ ಕಾರಜೋಳ,
ಸಚಿವ ಗೋವಿಂದ ಕಾರಜೋಳ ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಸೇರಿ ಸಂಜೀವನ ಗೆಲುವಿಗೆ ಶ್ರಮಿಸುತ್ತೇವೆ. ಅವರ ಗೆಲುವಿನ ಮೇಲೆ ನನ್ನದು ಹಾಗೂ ಕಾರಜೋಳ ಅವರು ಭವಿಷ್ಯ ನಿಂತಿದೆ ಎಂದು ಪುನರುಚ್ಚರಿಸಿದರು.
ನಾಗಠಾಣ ಮತಕ್ಷೇತ್ರದ ಪ್ರಚಾರಕ ರಾಜಶೇಖರ ಮಗಿಮಠ ಮಾತನಾಡಿದರು.
ಅಭ್ಯರ್ಥಿ ಸಂಜೀವ ಐಹೊಳ್ಳಿ ಮಾತನಾಡಿ, ಪಕ್ಷ ನನ್ನನ್ನು ಗುರುತಿಸಿ ಟಿಕೇಟ್ ನೀಡಿದೆ. ನನಗಿಂತ ಪಕ್ಷಕ್ಕಾಗಿ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮ ಅವಟಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಸದಸ್ಯ ಭೀಮಾಶಂಕರ ಬಿರಾದಾರ, ನಾಗರಾಜ ನಿರಾಳೆ, ರಾಜೇಂದ್ರ ಮುತ್ತಿನ, ಡಾ. ವಿ ಎಸ್ ಪತ್ತಾರ, ವಕೀಲ ಅಶೋಕ ಕುಲಕರ್ಣಿ, ಶಿವಾನಂದ ಮಖಣಾಪುರ, ಸಿದ್ದು ಬಗಲಿ, ಪ್ರಭಾಕರ ನಿರಾಳೆ, ಎಂ ಆರ್ ಹಿಟ್ನಳ್ಳಿ, ಸಂಗ ಟೇಲರ್, ವಿಜು ಅವಟಿ, ರಾಜು ತಂಗಾ, ಶ್ರೀಕಾಂತ ಗಂಟಗಲ್ಲಿ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.