ವಿಜಯಪುರದಲ್ಲಿ ರಾಹುಲ್ ಗಾಂಧಿ ರೋಡ್ ಶೋ | ಅಪಾರ ಜನಸ್ತೋಮ | ದಾರಿಯುದ್ದಕ್ಕೂ ಪುಷ್ಪವೃಷ್ಟಿ
ವಿಜಯಪುರ: ಅಣ್ಣ ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ, ಧನವನ್ನು ಅದಾನಿಗೆ ನೀಡಿ ಎಂದು ಎಲ್ಲಿಯೂ ಅಣ್ಣ ಬಸವಣ್ಣನವರು ಹೇಳಿಲ್ಲ, ಆದರೆ ಬಿಜೆಪಿ ಜನರ ಧನವನ್ನು ಅದಾನಿಗೆ ನೀಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧೀ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದರು.
ವಿಜಯಪುರ ನಗರದ ಕನಕದಾಸ ವೃತ್ತದಲ್ಲಿ ಬಾನುವಾರ ಸಂಜೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ತಮ್ಮ ವಿಚಾರ ವ್ಯಕ್ತಪಡಿಸಿದ ಅವರು, ಸಂದೇಶದುದ್ದಕ್ಕೂ ಅಣ್ಣ ಬಸವಣ್ಣನವರ ವಿಚಾರಧಾರೆಗಳನ್ನು ಪ್ರಸ್ತಾಪಿಸುತ್ತಾ, ಈ ವಿಚಾರಧಾರೆಗಳನ್ನು ಬಿಜೆಪಿ ಯಾವ ರೀತಿ ಗಾಳಿಗೆ ತೂರುತ್ತಿದೆ ಎಂಬ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟರು.
ಪ್ರತಿ ವ್ಯಕ್ತಿಯೂ ಪ್ರಮುಖ ಎನ್ನುವುದು ಅಣ್ಣ ಬಸವಣ್ಣನವರ ತತ್ವವಾಗಿತ್ತು, ಆದರೆ ಬಿಜೆಪಿಗೆ ಕೇವಲ ಅದಾನಿಯೇ ಪ್ರಮುಖ ಎಂದು ಲೇವಡಿ ಮಾಡಿದರು.
ರೈತನ ಮಗ ಉದ್ಯಮಿಯಾಗಬೇಕು, ಪೈಲಟ್ ಆಗಿ ವಿಮಾನ ಹಾರಿಸಬೇಕು ಎಂಬುದು ಅಣ್ಣ ಬಸವಣ್ಣನ ಆಶಯವಾಗಿತ್ತು, ಆದರೆ ಈ ಆಶಯವನ್ನು ಬಿಜೆಪಿ ಹಾಳು ಮಾಡಿದೆ, ಪಿಎಸ್‌ಐ ನೇಮಕಾತಿಯಲ್ಲೂ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದಿದೆ ಎಂದರು.
ಬಿಜೆಪಿ, ಆರ್.ಎಸ್‌ಎಸ್. ವಿಚಾರಧಾರೆಗಳಿಂದ ಕೋಮುದ್ವೇಷ ಎಲ್ಲೆಡೆ ಹರಡಿದೆ ಎಂದು ವಿಷಾದಿಸಿದರು. ಅಣ್ಣ ಬಸವಣ್ಣನ ಮಹಿಳಾ ಸಮಾನತೆ, ಪ್ರತಿಯೊಬ್ಬರಿಗೂ ಘನತೆಯ ಬದುಕು ಎಂಬ ಆಶಯ ಸಾಕಾರಗೊಳಿಸಲು ಕಾಂಗ್ರೆಸ್ ಗೃಹಲಕ್ಷಿö್ಮÃ, ಉಚಿತ ವಿದ್ಯುತ್ ಯೋಜನೆ ರೂಪಿಸಿದೆ, ನಾನು ಬಸವಣ್ಣನವರ ವಚನಗಳನ್ನು ಆಳವಾಗಿ ಅಧ್ಯಯನ ಮಾಡಿರುವೆ, ಅವರ ಆಶಯದ ಬದುಕು ಸಾಕಾರ ರೂಪಕ್ಕಾಗಿ ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಅರಬ್ ಪತಿಗಳ ಮದತ್ ಮಾಡಿ ಎಂದು ಹೇಳಿಲ್ಲ..
ಅರಬ್ ಪತಿಗಳ ಮದತ್ ಮಾಡಿ (ಕೋಟ್ಯಾಧೀಶರಿಗೆ ಸಹಾಯ ಮಾಡಿ) ಎಂದು ಅಣ್ಣ ಬಸವಣ್ಣನವರು ಹೇಳಿಲ್ಲ, ದುರ್ಬಲ ವರ್ಗದವರಿಗೆ ಸಹಾಯ ಮಾಡಿ ಎಂದು ಬಸವಣ್ಣನವರು ಹೇಳಿದ್ದಾರೆ, ಆದರೆ ಪ್ರಧಾನಿ ಮಾತ್ರ ಧನವನ್ನು ಅದಾನಿಗೆ ಕೊಡುತ್ತಿದ್ದಾರೆ, ಎಲ್‌ಐಸಿಯ ಧನವೂ ಅದಾನಿ ಪಾಲಾಗುತ್ತಿದೆ, ಅಣ್ಣ ಬಸವಣ್ಣನವರ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡುತ್ತಾರೆ ಹೊರತು ಅದರಂತೆ ನಡೆದುಕೊಳ್ಳುವುದಿಲ್ಲ, ಎಂದು ರಾಹುಲ್ ಕಿಡಿಕಾರಿದರು.
ಸತ್ಯ ಹೇಳಲು ಹೆದರಲಾರೆ
ಅದಾನಿ ಅವರಿಗೂ ಪ್ರಧಾನಮಂತ್ರಿ ಅವರಿಗೂ ಏನು ಸಂಬAಧ ಎಂದು ನಾನು ಪ್ರಶ್ನೆ ಮಾಡಿದೆ, ಮೊದಲು ಪಾರ್ಲಿಮೆಂಟ್‌ನಲ್ಲಿ ನನ್ನ ಮೈಕ್ ಕಿತ್ತುಕೊಂಡರು, ನಾನು ಮಾಡಿದ ಭಾಷಣ ಸಂಸದೀಯ ಭಾಷಣದ ರೆಕಾರ್ಡ್ಗೆ ಸೇರಲಿಲ್ಲ, ಈಗ ನನ್ನ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ, ಆದರೆ ಸತ್ಯ ಹೇಳಲು ಅನೇಕ ಸ್ಥಳಗಳಿವೆ, ನಾನು ಸತ್ಯವನ್ನು ಹೇಳಲು ಹೆದರುವುದಿಲ್ಲ, ಸತ್ಯವನ್ನು ಎಲ್ಲಿ ಬೇಕಾದರೂ ಹೇಳಬಹುದು, ಹೌದಲ್ಲವೇ?ಎಂದು ಪ್ರಶ್ನಿಸಿದರು.
ಶೇ.೪೦ ಕಮೀಷನ್ ಸರ್ಕಾರದ ೪೦ ಸೀಟು..
ರಾಜ್ಯದಲ್ಲಿ ಬಿಜೆಪಿ ಶೇ.4೦ ಕಮೀಷನ್ ಸರ್ಕಾರ, ಈ ಕಮೀಷನ್ ಹಣದಿಂದ ಎಂಎಲ್‌ಎಗಳನ್ನು ಕಳುವು ಮಾಡಿ ರಚನೆಯಾದ ಕಳ್ಳ ಸರ್ಕಾರವಾಗಿದೆ, ಆದರೆ ಈ ಶೇ.4೦ರ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬರುವುದು ಕೇವಲ ೪೦ ಸೀಟು ಎಂದು ರಾಹುಲ್ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಶೇ.4೦ ರಷ್ಟು ಕಮೀಷನ್ ಹಣದಿಂದ ಎಂಎಲ್‌ಎಗಳನ್ನು ಕದ್ದು ಸರ್ಕಾರ ರಚನೆ ಮಾಡಿದೆ, ಆದರೆ ಈ ಬಾರಿ ಈ ರೀತಿಯ ಪರಿಸ್ಥಿತಿ ಇಲ್ಲ, ಕಾಂಗ್ರೆಸ್ ೧೫೦ ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುತ್ತಿಗೆದಾರ ಸಂಘದವರು ಪ್ರಧಾನಮಂತ್ರಿಗೆ ಪತ್ರ ಬರೆದು ರಾಜ್ಯದಲ್ಲಿ ಶೇ.4೦ ರಷ್ಟು ಕಮೀಷನ್ ಬಗ್ಗೆ ಉಲ್ಲೇಖಿಸಿದ್ದಾರೆ, ಈ ಪತ್ರದ ಕುರಿತು ಪ್ರಧಾನಮಂತ್ರಿ ಉತ್ತರ ನೀಡಿಲ್ಲ, ಉತ್ತರ ನೀಡುವುದೂ ಇಲ್ಲ, ಮೋದಿ ಮಾತು ಎತ್ತಿದರೆ ಸಾಕು ತಾವು ಭ್ರಷ್ಟಾಚಾರ ವಿರೋಧಿ ಎನ್ನುತ್ತಾರೆ, ಆದರೆ ಅವರ ಅಕ್ಕಪಕ್ಕದಲ್ಲಿರುವವರು ಯಾರು ಎಂಬುದನ್ನು ನೋಡಿಕೊಳ್ಳಲಿ ಎಂದು ರಾಹುಲ್ ಹೇಳಿದರು.
ನಫ್ರತ್ ಕೀ ಬಾಜಾರ್ ಮೇ ಮೊಹಬ್ಬತ್ ಕೀ ದುಖಾನ್..
ನಾನು ಯಾರ ಬಗ್ಗೆಯೂ ಕೆಟ್ಟ ಪದ ಆಡುವುದಿಲ್ಲ, ಆದರೂ ನನ್ನ ಸದಸ್ಯತ್ವ ಹೋಯಿತು, ನನ್ನ ಮನೆ ಕಿತ್ತುಕೊಂಡರು, ಆದರೆ ಅದರಿಂದ ನನಗೆ ಏನೂ ಆಗಿಲ್ಲ, ಅವರು ಮನೆ ಕಿತ್ತುಕೊಂಡಿದ್ದು ಒಳ್ಳೆಯದಾಯಿತು, ಸಾವಿರಾರು ಜನರು ನನಗೆ ಪತ್ರ ಬರೆದು ನನ್ನ ಮನೆಗೆ ಬನ್ನಿ, ನನ್ನ ಮನೆಗೆ ಬನ್ನಿ ಎಂದು ಆತ್ಮೀಯತೆಯಿಂದ ಆಹ್ವಾನಿಸಿದರು. ನನಗೆ ಜನತೆಯ ಹೃದಯವೇ ಶಾಶ್ವತ ಮನೆ, ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ ಎಂದು ಹಿಂದಿಯ ಪ್ರಸಿದ್ಧ ಸಾಲುಗಳನ್ನು ಭಾವನಾತ್ಮಕವಾಗಿ ಉಲ್ಲೇಖಿಸಿದ ರಾಹುಲ್ `ನಫ್ರತ್ ಕೀ ಬಾಜಾರ್ ಮೇ ಮೊಹಬ್ಬತ್ ಕೀ ದುಖಾನ್ ಹೈ…’ (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿರುವೆ) ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ರಾಹುಲ್ ಗಾಂಧೀ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು.
ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ವಿಜಯಪುರ ನಗರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್‌ಹಮೀದ್ ಮುಶ್ರೀಫ್, ನಾಗಠಾಣ ಅಭ್ಯರ್ಥಿ ವಿಠ್ಠಲ ಕಟಕದೋಂಡ, ಮಾಜಿ ಸಚಿವ ಹಾಗೂ ಮುದ್ದೇಬಿಹಾಳ ಅಭ್ಯರ್ಥಿ ಸಿ.ಎಸ್. ನಾಡಗೌಡ ಮೊದಲಾದವರು ಉಪಸ್ಥಿತರಿದ್ದರು.