ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮೇ.೧೦ ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಏಣಿಕೆ ಕೇಂದ್ರಕ್ಕೆ ಶನಿವಾರ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಭೇಟಿ ನೀಡಿ, ಮತ ಎಣಿಕೆ ಕಾರ್ಯದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮತ ಎಣಿಕೆ ಕೇಂದ್ರ ಸಿದ್ಧತೆಯ ಸಮಗ್ರ ಚಿತ್ರಣವನ್ನು ವೀಕ್ಷಕರಿಗೆ ವಿವರಿಸಿದರು. ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಯಂತ್ರಗಳ ದಾಸ್ತಾನು, ಭದ್ರತಾ ಕೊಠಡಿ, ಮಾಧ್ಯಮ ಕೊಠಡಿ, ಮತಗಳ ಎಣಿಕೆ ಕೊಠಡಿಗಳು, ವೀಕ್ಷಕರ ಕೊಠಡಿ ನಿಗದಿಪಡಿಸಿರುವ ಕೊಠಡಿಗಳ ಮಾಹಿತಿ ವೀಕ್ಷಕರಿಗೆ ನೀಡಲಾಯಿತು. ಮೇ.೧೦ ರಂದು ಜರುಗುವ ಮತದಾನ ಪ್ರಕ್ರಿಯೆ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳ ಇವಿಎಂ ಮತಯಂತ್ರಗಳನ್ನು ನಗರದ ಸೈನಿಕ ಶಾಲೆಯಲ್ಲಿ ನಿರ್ಮಿಸಲಾಗುವ ಭದ್ರತಾ ಕೊಠಡಿಯಲ್ಲಿ ದಾಸ್ತಾನು ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತ ಏಣಿಕೆ ಕೇಂದ್ರದಲ್ಲಿ ಸ್ಥಾಪಿಸಲಾದ ಮಾಧ್ಯಮ ಕೊಠಡಿಯಲ್ಲಿ ಮಾಧ್ಯಮದವರಿಗೆ ಸೂಕ್ತ ಆಸನಗಳ ವ್ಯವಸ್ಥೆಯ ಜೊತೆಗೆ ಮತ ಎಣಿಕೆ ಕಾರ್ಯದ ಪ್ರಗತಿಯ ವಿವರಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮತ ಎಣಿಕೆ ಕಾರ್ಯದ ಪ್ರಗತಿ ಚಿತ್ರಣ ಮಾಧ್ಯಮ ಕೊಠಡಿಯಲ್ಲಿಯೇ ಲಭ್ಯವಾಗುತ್ತದೆ. ಮತ ಎಣಿಕೆ ಕೊಠಡಿಯಲ್ಲಿ ನಿಯಮಾನುಸಾರ ಸಂಬAಧಪಟ್ಟ ಏಜೆಂಟರುಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಮತ ಎಣಿಕೆ ಕೇಂದ್ರದ ಸುತ್ತಲೂ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು. ಮತ ಎಣಿಕೆ ಕೊಠಡಿಗೆ ಅಗತ್ಯ ಟೇಬಲ್ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಮತ ಎಣಿಕೆ ಕಾರ್ಯಕ್ಕಾಗಿ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ವೀಕ್ಷಕರು ಮತ ಎಣಿಕೆ ಕೇಂದ್ರಕ್ಕೆ ಆಯ್ಕೆ ಮಾಡಿರುವ ಎಲ್ಲ ಕೊಠಡಿಗಳು, ಇವಿಎಂ ದಾಸ್ತಾನಿನ ಭದ್ರತಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿ, ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಎಲ್ಲಾ ವಿಧಾನ ಸಭಾ ಮತಕ್ಷೇತ್ರದ ನಿರ್ವಾಚನಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಮಲಜಿ, ಸೈನಿಕ ಶಾಲೆಯ ಆಡಳಿತಾಧಿಕಾರಿ ಆಕಾಶ ವತ್ಸ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು