ವಿಜಯಪುರ: ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮೂಲ ಸಿದ್ದಾಂತ ಹಿಂದುತ್ವ ಮತ್ತು ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಜಿಲ್ಲಾದ್ಯಂತ ನಾಳೆಯಿಂದ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.
ಶನಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಭಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊ0ಡು ಮತದಾರರ ಬಳಿ ಹೋಗುತ್ತೇವೆ. ಜಿಲ್ಲೆಯಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ, ಬೂದಿಹಾಳ-ಪೀರಾಪೂರ ಏತ ನೀರಾವರಿ ಸೇರಿದಂತೆ ಜಿಲ್ಲೆಯಲ್ಲಿ ನೀರಾವರಿಗಾಗಿಯೇ ಒಟ್ಟು ರೂ. 505 ಕೋಟಿ ಖರ್ಚು ಮಾಡಲಾಗುತ್ತಿದೆ. ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು
ವಿದ್ಯೆಯಿಂದ ವಂಚಿತರಾಗಬಾರದೆ0ದು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ಬಂದಿದೆ. ೮ವರ್ಷಗಳ ಹಿಂದೆ ಜಿಲ್ಲಾದ್ಯಂತ ಇದ್ದ ಎಲ್ಲ ಹದಗೆಟ್ಟ ರಸ್ತೆಗಳು ಇಂದು ಉತ್ತಮ ರಸ್ತೆಗಳಾಗಿವೆ. ಬಿಜೆಪಿ ಸರಕಾರದ ಅಭಿವೃದ್ಧಿಯನ್ನು ಮೆಚ್ಚಿ ಮತದಾರರೀಗ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭ ಸ್ವಯಂಪ್ರೇರಿತರಾಗಿ ೩೦ ಸಾವಿರಕ್ಕೂ ಅಧಿಕ ಜನ ಸೇರಿದ್ದನ್ನು ಕಂಡು ನಮಗೆ ಈ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.
ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಹೊಸತನವಿದೆ. ಹಳೆಬೇರು-ಹೊಸ ಚಿಗುರು ಸೇರಿಕೊಂಡಿದೆ. ವರಿಷ್ಠರು ಕಾರ್ಯಕರ್ತರ ಅಭಿಪ್ರಾಯ ಕ್ರೋಢಿಕರಿಸಿ ಹಾಗೂ ಸಮೀಕ್ಷೆಗಳ ಮಾನದಂಡವನ್ನಾಧರಿಸಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದರು.
ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ ಮತ್ತು ಬಸವರಾಜ ಬಿರಾದಾರ ಇದ್ದರು.
ಲಿಂಗಾಯತರ ಮೇಲಿನ ಕಾಂಗ್ರೆಸ್ ಪ್ರೀತಿ ಕೇವಲ ಹೇಳಿಕೆಗೆ ಸೀಮಿತ
ಕಾ0ಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದ ಕುರಿತು ಈಗ ಒಲವು ತೋರಿಸುತ್ತಿದ್ದು, ಇದು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಒಂದೆಡೆ ಲಿಂಗಾಯಿತರ ಬಗ್ಗೆ ಪ್ರೀತಿ ತೋರಿಸುವ ಮಾತನಾಡಿ, ಇನ್ನೊಂದೆಡೆ ಅಧಿಕಾರಕ್ಕೆ ಬಂದರೆ ಲಿಂಗಾಯತರ ಒಳ ಮೀಸಲಾತಿ ರದ್ದುಪಡಿಸುವುದಾಗಿ ಹೇಳುತ್ತದೆ. ಆ ಪಕ್ಷ ಲಿಂಗಾಯತ ನಾಯಕ ವಿರೇಂದ್ರ ಪಾಟೀಲರನ್ನು ಅಮಾನವೀಯವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕಿದ್ದನ್ನು ಲಿಂಗಾಯತರಿನ್ನೂ ಮರೆತಿಲ್ಲ. ಅಧಿಕಾರದಲ್ಲಿದ್ದಾಗ ಲಿಂಗಾಯತ ಧರ್ಮವನ್ನು ಒಡೆಯಲು ಹೋಗಿದ್ದು, ಶಾಲಾ ಮಕ್ಕಳಿಂದ ಹಿಡಿದು ಎಲ್ಲ ಸಮುದಾಯಗಳಲ್ಲೂ ಒಡೆದಾಳುವ ನೀತಿ ಅನುಸರಿಸಿದ ಕಾಂಗ್ರೆಸ್ಸನ್ನು ಲಿಂಗಾಯತರು ನಂಬುವುದು ದೂರದ ಮಾತು ಎಂದು ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.