ಇಂಡಿ: ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಸರ್ವರನ್ನು ಗೌರವಿಸುವ ಸಂಭಾವಿತ ವ್ಯಕ್ತಿಯಾಗಿದ್ದು, ಅವರಿಗೆ ನಿಮ್ಮ ಮತ ನೀಡಿ ಆಯ್ಕೆ ಮಾಡಬೇಕೆಂದು ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಮನವಿ ಮಾಡಿಕೊಂಡರು.
ಶುಕ್ರವಾರ ಸಂಜೆ ತಾಲ್ಲೂಕಿನ ರೂಗಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಚುನಾವಣೆ ಹಣಬಲವೋ ಇಲ್ಲವೆ ಜನಬಲವೋ ಎನ್ನುವುದನ್ನು ನಿರ್ಧರಿಸುವ ಚುನಾವಣೆಯಾಗಿದೆ. ಹಣಕ್ಕೆ ಮತದಾರರು ಮನ ಸೋಲಬಾರದು ಎಂದು ಮನವಿ ಮಾಡಿಕೊಂಡ ಅವರು, ರೈತರ ಸಮಸ್ಯೆಗಳನ್ನು ಆಲಿಸುವ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ ಬಿ.ಡಿ. ಪಾಟೀಲರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಹಾಗೂ ನಿಂಬೆ ಬೆಳೆಗಾರರ ಹಿತರಕ್ಷಣೆಗೆ ಕಂಕಣಬದ್ಧನಾಗಿದ್ದೇನೆ. ತಮ್ಮ ಸೇವೆಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.