ತಿಕೋಟಾ: ವಿಭೂತಿ ಮಾರಾಟ ಮಾಡುವ ದಂಪತಿಯ ಪುತ್ರ ದ್ವಿತೀಯ ಪಿಯುಸಿಯಲ್ಲಿ ಶೆ.91.33 ರಷ್ಟು ಅಂಕ ಪಡೆಯುವ ಮೂಲಕ ಹೆತ್ತವರ, ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಶ್ರೀಶೈಲ ಹಿರೇಮಠ ಹಾಗೂ ಕಲ್ಪನಾ ದಂಪತಿಗಳ ಪುತ್ರ ಷಡಕ್ಷರಿ ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ತಂದೆ ತಾಯಿಯ ಖುಷಿಯನ್ನು ಇಮ್ಮಡಿಗೊಳಿಸಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಿ.ಎಲ್.ಡಿ.ಇ ಸಂಸ್ಥೆಯ ಕಾಮರ್ಸ ಬಿಎಚ್ಎಸ್ ಆರ್ಟ್ಸ ಆ್ಯಂಡ್ ಟಿಜಿಪಿ ಸೈನ್ಸ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡಿದ ಷಡಕ್ಷರಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ.ವಾಂಗಿ, ಎಂ.ಎಂ.ಪುಟ್ಟನವರ, ಗುರು ಹಿರೇಮಠ ಹಾಗೂ ಕಾಲೇಜಿನ ಸಿಬ್ಬಂದಿಗಳ ಮಾರ್ಗದರ್ಶನದಿಂದ ಹೆಚ್ಚಯ ಅಂಕ ಪಡೆದುಕೊಂಡಿದ್ದಾನೆ.
ತಂದೆ ತಾಯಿಗಳು ಜಾತ್ರೆ, ಪೂಜ್ಯರ ಪ್ರವಚನ ಸ್ಥಳ ಹಾಗೂ ಸಿದ್ದೇಶ್ವರ ಶ್ರೀಗಳ ಆಶ್ರಮ ಸ್ಥಳಗಳಲ್ಲಿ ವಿಭೂತಿ ವ್ಯಾಪಾರ ಮಾಡುತ್ತಾರೆ. ಊರೂರು ಸುತ್ತುತ್ತಾ ವಿಭೂತಿ ವ್ಯಾಪಾರ ನಡೆಸುವ ಈ ದಂಪತಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನ ಸಂಗಮನಾಥ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮಾಣಿಕೇಶ್ವರಿ ಬಿಜ್ಜರಗಿಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಜಮಖಂಡಿಯ ಕಾಲೇಜಿನಲ್ಲಿ ಪೂರೈಸಿದ್ದಾನೆ. ಮುಂದಿನ ಶಿಕ್ಷಣವನ್ನು ಬಿಸಿಎ ಹಾಗೂ ಎಂಸಿಎ ಪದವಿ ಪಡೆದು ಉನ್ನತ ಹುದ್ದೆ ಪಡೆಯುವ ಆಶೆ ಹೊಂದಿದ್ದೇನೆ ಎಂದು ಸಾಧಕ ವಿದ್ಯಾರ್ಥಿ ಷಡಕ್ಷರಿ ತಿಳಿಸಿದನು.
ಊರೂರು ಸುತ್ತಿ ವಿಭೂತಿ ವ್ಯಾಪಾರ ಮಾಡುವ ನಮ್ಮಂತೆ ಮಕ್ಕಳು ಆಗಬಾರದು. ಅದಕ್ಕಾಗಿ ಉನ್ನತ ಶಿಕ್ಷಣ ಕೊಡುತ್ತಿದ್ದೇವೆ. ಅದರಂತೆ ಅವರು ಕೂಡಾ ಉತ್ತಮ ಅಂಕ ಪಡೆಯುತ್ತಿದ್ದಾರೆ ಖುಷಿಯಾಗುತ್ತದೆ.
ಶ್ರೀಶೈಲ ಹಿರೇಮಠ, ವಿಭೂತಿ ವ್ಯಾಪಾರಿ
ಪ್ರತಿ ದಿನ ಐದಾರು ಘಂಟೆ ಅಭ್ಯಾಸ ಮಾಡುತ್ತಿದ್ದೆ, ಕಠಿಣ ವಿಷಯಗಳನ್ನು ಹೆಚ್ಚು ಓದುತ್ತಿದ್ದೆ, ಅರ್ಥವಾಗದಿದ್ದರೆ ಶಿಕ್ಷಕರ ಮಾರ್ಗದರ್ಶನ ಪಡೆಯುತ್ತಿದ್ದೆ. ಶಿಕ್ಷಕರ ಉತ್ತಮ ಬೋಧನೆಯಿಂದ ಹೆಚ್ಚು ಅಂಕ ಪಡೆಯಲು ಸಹಾಯವಾಯಿತು.
ಷಡಕ್ಷರಿ ಹಿರೇಮಠ, ವಿದ್ಯಾರ್ಥಿ