ನಾಗಠಾಣದ ಬಂಜಾರಾ ಸಮಾಜದ ಸಾವಿರಾರು ಜನ ಕಾಂಗ್ರೆಸ್ ಸೇರ್ಪಡೆ
ವಿಜಯಪುರ: ಇಂದಿರಾಗಾಂಧಿ ಮತ್ತು ಕಾಂಗ್ರೆಸ್‌ನ ಬಹುದೊಡ್ಡ ಕೊಡುಗೆ ಬಂಜಾರಾ ಸಮಾಜಕ್ಕೆ ಇದೆ. ಸುಳ್ಳು ಹೇಳುವ ಮೋದಿಯದ್ದಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಶನಿವಾರ ನಗರದಲ್ಲಿ ತಮ್ಮ ನೇತೃತ್ವದಲ್ಲಿ ನಾಗಠಾಣ ಮತ ಕ್ಷೇತ್ರದ ಸಾವಿರಾರು ಲಂಬಾಣಿ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆಯ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಇಂದಿರಾಗಾಂಧಿ. ಸಂತ ಸೇವಾಲಾಲರ ಜಯಂತಿ ಆಚರಣೆಗೆ ತಂದಿದ್ದು ಸಿದ್ದರಾಮಯ್ಯ. ದೇವರಾಜ್ ಅರಸ್, ಕೆ.ಟಿ.ರಾಠೋಡ್, ಎಲ್.ಆರ್. ನಾಯಕ್ ಅವರಿಂದ ಸಮುದಾಯ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಬಂಜಾರಾ ಸಮಾಜದ ಹಿತ ಕಾಪಾಡುತ್ತಲೇ ಬಂದಿದೆ. ಆದರೆ ಬಿಜೆಪಿ ಮಾತ್ರ ಈಗ ಒಳ ಮೀಸಲಾತಿ ನೆಪದಲ್ಲಿ ನಿಮ್ಮನ್ನು ಸದಾಶಿವ ಆಯೋಗದಿಂದಲೇ ಕೈಬಿಡುವ ಹುನ್ನಾರ ನಡೆಸಿದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.
ಲಂಬಾಣಿಗರೆಂದರೆ ಗೌಡ, ಸಾಹುಕಾರರಿಗಿಂತ ಮೂಲ ಕಾಂಗ್ರೆಸ್ಸಿಗರು. ಇತ್ತೀಚೆಗೆ ಭ್ರಮೆಯ ಬಲೆಯಲ್ಲಿ ಹಲವರು ಬಿಜೆಪಿ ಕಡೆ ಸಿಕ್ಕಿಹಾಕಿಕೊಂಡರು. ಈಗ ನಿಜ ಸ್ಥಿತಿ ಗೊತ್ತಾಗಿ ಎಲ್ಲರೂ ಮತ್ತೆ ಮರಳುತ್ತಿದ್ದಾರೆ. ಬಿಜೆಪಿಯವರ ಸುಳ್ಳಿನ ಸುಳಿಗೆ ಸಿಕ್ಕು ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಅವರ ಹುನ್ನಾರ ತಡೆಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಸಲ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಿಮ್ಮ ಹಿತ ಕಾಪಾಡೋದು ನಮ್ಮ ಧ್ಯೇಯ. ಹಾಗಾಗಿ ನಿಮ್ಮ ಬೆಂಬಲ ಇರಲಿ ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಪ್ರಾಸ್ತಾವಿಕ ಮಾತನಾಡಿ, ಬಂಜಾರಾ ಸಮಾಜದ ಈ ಅಭೂತಪೂರ್ವ ಬೆಂಬಲದಿಂದ ಆನೆ ಬಲ ಬಂದಿದೆ. ಸ್ವಯಂ ಪ್ರೇರಣೆಯಿಂದ ನೀವೆಲ್ಲ ಬೆಂಬಲ ತೋರಿದ್ದಕ್ಕೆ ಋಣಿಯಾಗಿದ್ದು, ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಿಮ್ಮದೇ ಸಮುದಾಯದ ಶಾಸಕರಿಂದ ನಿಮಗೆ ಭ್ರಮನಿರಸನವಾಗಿದೆ. ಆ ಕೊರತೆಯನ್ನು ನಾನು ತುಂಬುವೆ ಎಂದು ಭರವಸೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣೆ ಉಸ್ತುವಾರಿ ವಿಷ್ಣುನಾಥ್, ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮುಖಂಡರಾದ ಡಿ.ಎಲ್. ಚವ್ಹಾಣ, ರಾಜು ಜಾಧವ, ಎಂ.ಆರ್. ಪಾಟೀಲ, ಸೇತುರಾಮ್, ಜಿ.ಎಸ್.ಸಂಬಣ್ಣಿ, ವಿಠ್ಠಲ ಬಿರಾದಾರ, ಪ್ರಕಾಶ ಪಾಟೀಲ ಚಂದ್ರಶೇಖರ ಅರಕೇರಿ ಅನೇಕರಿದ್ದರು.