ಇಂದು (ಅ.೦೨) ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ:
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬
ಉದಯರಶ್ಮಿ ದಿನಪತ್ರಿಕೆ
ಪ್ರಪಂಚವೇ ಮಹಾತ್ಮಾ ಎಂದು ಕರೆದ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿ, ಭಾರತ ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ರಾಮರಾಜ್ಯದ ಕನಸನ್ನು ಕಂಡಿದ್ದರು. ಗಾಂಧೀಜಿಯವರ ರಾಮರಾಜ್ಯವು ಹಿಂದೂ ರಾಜ್ಯವಾಗಿರದೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜವಾಗಬೇಕು ಎಂಬ ಕನಸು ಅವರಲ್ಲಿತ್ತು. ಮಹಾತ್ಮಾ ಗಾಂಧೀಜಿಯವರ ಕುರಿತು ಕೆಲವೊಂದು ಅಚ್ಚರಿಯ ವಿಚಾರಗಳು ಇಲ್ಲಿವೆ.
ಗಾಂಧೀಜಿಯು ನಾವು ಜೀವಿಸಲು ತಿನ್ನಬೇಕೇ ಹೊರತು, ತಿನ್ನಬೇಕೆಂದು ಜೀವಿಸಬಾರದು ಎಂಬ ತತ್ವಕ್ಕೆ ಬದ್ಧರಾಗಿದ್ದರು. ಅವರು ಎಷ್ಟು ಸಾಧ್ಯವೋ ಅಷ್ಟು ಕನಿಷ್ಠ ಆಹಾರವನ್ನು ಸೇವಿಸುತ್ತಿದ್ದರು. ಅನೇಕ ಬಾರಿ ಅವರು ಕೇವಲ ಹಣ್ಣಷ್ಟೇ ತಿಂದು ಆಡಿನ ಹಾಲನ್ನು ಕುಡಿದು ಬದುಕುತ್ತಿದ್ದರು. ಗಾಂಧೀಜಿಯು ವಿದೇಶದಲ್ಲಿ ಹ್ಯಾಟ್ ಧರಿಸಿದರೆ ಭಾರತ ದೇಶದಲ್ಲಿ ಪಂಚೆಯನ್ನು ಧರಿಸುತ್ತಿದ್ದರು. ಬ್ರಿಟನ್ ಹಾಗೂ ಆಫ್ರಿಕದಲ್ಲಿ ಕೆಲಸ ಮಾಡುವಾಗ ಗಾಂಧೀಜಿ ಅವರು ಸೂಟು, ರೇಷ್ಮೆ ಬಟ್ಟೆಗಳು, ಟೈ ಹಾಗೂ ಹ್ಯಾಟ್ ಧರಿಸಿ ಕೈಯಲ್ಲಿ ಕೋಲನ್ನು ಹಿಡಿದುಕೊಳ್ಳುತ್ತಿದ್ದರು. ಆದರೆ ಭಾರತಕ್ಕೆ ಮರಳಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದಾಗ ಅವರು ಕೇವಲ ಪಂಚೆ ಹಾಗೂ ಚಿಕ್ಕ ಶಲ್ಯ ಧರಿಸುತ್ತಿದ್ದರು.

ಗಾಂಧೀಜಿಯು ಬ್ಯಾರಿಸ್ಟರ್ ಪದವಿಯನ್ನು ಪಡೆದು ಲಂಡನ್ನಲ್ಲಿ ವಕೀಲ ವೃತ್ತಿ ಆರಂಭಿಸಿದಾಗ ಅವರು ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿಲ್ಲ. ಅಪಾರ ಸಾಲವನ್ನು ಮಾಡಿ ಸಾಕಷ್ಟು ಹಣಕಾಸು ತೊಂದರೆ ಅನುಭವಿಸಿದರು. ಆದರೆ ನಂತರ ದ.ಆಫ್ರಿಕಕ್ಕೆ ತೆರಳಿದಾಗ ಅಲ್ಲಿ ಅವರು ಯಶಸ್ವಿಯಾಗಿ ಅಂದಿನ ಕಾಲದಲ್ಲೇ ಸುಮಾರು ೧೫ ಸಾವಿರ ಡಾಲರ್ವರೆಗೂ ಸಂಪಾದನೆ ಮಾಡಿದ್ದರು. ಗಾಂಧೀಜಿಯು ವಿಶ್ವದ ಹಲವು ದೇಶಗಳನ್ನು ಸುತ್ತಿದರೂ ಅಮೆರಿಕಕ್ಕೆ ಮಾತ್ರ ತನ್ನ ಜೀವಿತಾವಧಿಯಿಡೀ ಭೇಟಿ ನೀಡಿಯೇ ಇರಲಿಲ್ಲ. ಆದರೆ ಗಾಂಧೀಜಿಯು ಅಮೆರಿಕದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಗಾಂಧೀಜಿ ಅವರ ಅಭಿಮಾನಿಯಾಗಿದ್ದ ಅಮೆರಿಕಾದ ಹೆನ್ರಿ ಫೋರ್ಡ್ರು ಗಾಂಧೀಜಿಗೆ ಚರಕವೊಂದನ್ನು ಉಡುಗೊರೆಯಾಗಿ ನೀಡಿದ್ದರು.
ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಎಂದರೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದು, ಭಾರತದಲ್ಲಿ ಬರೋಬ್ಬರಿ ೫೩ ಪ್ರಮುಖ ರಸ್ತೆಗಳು ಮಹಾತ್ಮಾ ಗಾಂಧಿ ರಸ್ತೆ ಎಂಬ ಹೆಸರು ಹೊಂದಿವೆ. ಇಷ್ಟೇ ಅಲ್ಲದೇ ವಿದೇಶಗಳಲ್ಲೂ ಸರಿಸುಮಾರು ೪೮ ಮಹಾತ್ಮಾ ಗಾಂಧಿ ರಸ್ತೆಗಳಿವೆ ಎನ್ನುವುದು ಗಾಂಧೀಜಿಯ ಪ್ರಖ್ಯಾತಿಯನ್ನು ಸೂಚಿಸುತ್ತದೆ. ಮಹಾತ್ಮಾ ಗಾಂಧೀಜಿ ಯು ಫುಟ್ಬಾಲ್ ಆಟದಲ್ಲಿ ಅತೀವ ಕುತೂಹಲ ಹೊಂದಿದ್ದು, ದಕ್ಷಿಣ ಆಫ್ರಿಕದಲ್ಲಿದ್ದಾಗ ಡರ್ಬನ್, ಪ್ರಿಟೋರಿಯಾ, ಜೋಹಾನ್ಸ್ಬರ್ಗ್ ಫುಟ್ಬಾಲ್ ಕ್ಲಬ್‌ಗಳ ಸ್ಥಾಪನೆಗೆ ಕೈಜೋಡಿಸಿದ್ದರು. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಡಲು ಗಾಂಧಿ ಫುಟ್ಬಾಲ್ ಆಟದ ಮೂಲಕ ಪ್ರಚಾರವನ್ನು ನಡೆಸಿದ್ದರು.
ಇಂಗ್ಲಿಷ್ ಬ್ಯಾರಿಸ್ಟರ್ ಪದವೀಧರರಾಗಿದ್ದ ಗಾಧೀಜಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು. ಗಾಂಧೀಜಿ ಅವರ ಮೊದಲ ಇಂಗ್ಲಿಷ್ ಗುರು ಐರ್ಲೆಂಡ್ ಮೂಲದವರಾಗಿದ್ರಿಂದ ಅವರ ಮಾತಿನ ಇಂಗ್ಲೀಷ್ ಶೈಲಿಯು ಬ್ರಿಟಿಷ್ ಅಥವಾ ಭಾರತೀಯ ಶೈಲಿಯದ್ದಾಗಿರದೇ ಐರಿಷ್ ಶೈಲಿಯ ಇಂಗ್ಲೀಷ್ ಮಾತನಾಡುತ್ತಿದ್ದರು. ಗಾಂಧೀಜಿಯು ಸದಾ ತಮ್ಮೊಂದಿಗೆ ಒಂದು ಹಲ್ಲಿನ ಸೆಟ್ ಒಯ್ಯುತ್ತಿದ್ದರು. ಅದನ್ನು ತಮ್ಮ ಬಟ್ಟೆಯಲ್ಲಿ ಸುತ್ತಿಟ್ಟುಕೊಂಡು ಇರುತ್ತಿದ್ದರು. ಅವರು ಹಲ್ಲಿನ ಸೆಟ್‌ನ್ನು ಊಟ ಮಾಡುವಾಗ ಮಾತ್ರ ಹಾಕಿಕೊಳ್ಳುತ್ತಿದ್ದರು. ಊಟ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಿ ಮತ್ತೆ ಬಟ್ಟೆಯಲ್ಲಿ ಮಡಚಿಟ್ಟುಕೊಳ್ಳುತ್ತಿದ್ದರು.
ಆ್ಯಪಲ್ ಸಂಸ್ಥಾಪಕ ಸ್ಟೀವ್‌ಜಾಬ್ಸ್ ಅವರಿಗೆ ಗಾಂಧೀಜಿಯ ಜೀವನಗಾಥೆಯು ಸ್ಫೂರ್ತಿಯಾಗಿದ್ದುದರಿಂದ ಅವರು ಗಾಂಧೀಜಿಗೆ ವಿಶಿಷ್ಟ ರೀತಿಯ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಜಾಬ್ಸ್ ಅವರು ಗಾಂಧೀಜಿ ಅವರು ಧರಿಸುತ್ತಿದ್ದ ದುಂಡನೆಯ ಮಾದರಿಯ ಕನ್ನಡಕವನ್ನು ಧರಿಸಿ ಅವರನ್ನು ಸ್ಮರಿಸುತ್ತಾರೆ.
ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿ ಕಾಂಗ್ರೆಸ್ ಪಕ್ಷವು ಇತ್ತು. ಈ ಪಕ್ಷವು ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ನಂತರ ವಿಸರ್ಜನೆ ಆಗಬೇಕು, ಅದು ದುರ್ಬಳಕೆ ಆಗಬಾರದು ಎಂಬುದು ಗಾಂಧೀಜಿಯ ಇಚ್ಛೆಯಾಗಿತ್ತು. ಕಾಂಗ್ರೇಸ್ ಪಕ್ಷದ ವಿಸರ್ಜನೆಯ ಕುರಿತು ಗಾಂಧೀಜಿ ಮಾತನಾಡಿದ ಒಂದು ದಿನದ ನಂತರ ಗಾಂಧೀಜಿಯ ಹತ್ಯೆಯಾದ್ದರಿಂದ ಕಾಂಗ್ರೆಸ್ ಪಕ್ಷದ ವಿಸರ್ಜನೆಯ ಅವರ ಕನಸು ಕೈಗೂಡಲಿಲ್ಲ. ಗಾಂಧೀಜಿಯು ದೇಶದ ಅನೇಕ ವರ್ಷಗಳ ಕಾಲ ದೇಶದ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿ ಇದ್ದರೂ ಅವರು ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ. ಕಾಂಗ್ರೆಸ್ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿ ಇದ್ದರೂ ಗಾಂಧೀಜಿ ಅವರು ಅದರಲ್ಲಿ ಹುದ್ದೆ ಹೊಂದಿರದೇ ಅಘೋಷಿತ ಮುಖ್ಯಸ್ಥನಾಗಿ ಕಾಂಗ್ರೆಸ್ಸನ್ನು ಮುನ್ನಡೆಸಿದ್ದರು.
ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಕೊಂದಿದ್ದು, ಆ ಸಂದರ್ಭದಲ್ಲಿ ಅವರು ಧರಿಸಿದ್ದ ಖಾದಿ ಪಂಚೆ, ಶಲ್ಯ, ಕನ್ನಡಕ, ಕೋಲು ಇತ್ಯಾದಿಗಳನ್ನು ಈಗಲೂ ಸಂಗ್ರಹಿಸಿಡಲಾಗಿದ್ದು, ಇವು ತಮಿಳುನಾಡಿನ ಮದುರೈ ವಸ್ತು ಸಂಗ್ರಹಾಲಯದಲ್ಲಿವೆ.
ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಅವರು, ಭಾರತಕ್ಕೆ ಸ್ವಾತಂತ್ರ‍್ಯ ಘೋಷಣೆಯಾಗುವ ಸಂದರ್ಭದಲ್ಲಿ (ಆಗಸ್ಟ್ ೧೪ರ ಮಧ್ಯರಾತ್ರಿ) ಸಂಸತ್ತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಐತಿಹಾಸಿಕ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ‍್ಯ ದೊರಕಿಸಿದ ಗಾಂಧೀಜಿ ಅಲ್ಲಿರದೇ ಕೋಲ್ಕತಾದಲ್ಲಿ ಧಾರ್ಮಿಕ ಸೌಹಾರ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಾಂಧೀಜಿ ಅವರಿಗೆ ವಿಶ್ವದ ಅನೇಕ ಘಟಾನುಘಟಿಗಳ ಜತೆ ಸಂಪರ್ಕವಿದ್ದು, ಲಿಯೋ ಟಾಲ್ಸ್ಟ್ರಾಯ್, ಅಲ್ಬರ್ಟ್ ಐನ್‌ಸ್ಟೀನ್ ಹಾಗೂ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರುಗಳ ಜತೆ ಗಾಂಧೀಜಿಯು ಪತ್ರ ವ್ಯವಹಾರವನ್ನು ನಡೆಸುತ್ತಿದ್ದರು ಎಂಬುದು ಅಚ್ಚರಿಯ ವಿಚಾರ. ಶಾಂತಿಯ ಪ್ರತೀಕವಾದ ಮಹಾತ್ಮಾ ಗಾಂಧೀಜಿಯು ಸೇನೆಯಲ್ಲಿದ್ದರು ಎಂದರೆ ಯಾರೂ ನಂಬುವುದಿಲ್ಲ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧ ಅಲ್ಲಿನ ಸ್ಥಳೀಯರು ನಡೆಸಿದ ‘ಬೋಯೆರ್ ಕದನ’ದಲ್ಲಿ ಗಾಂಧೀಜಿಯು ದಕ್ಷಿಣ ಆಫ್ರಿಕಾದ ಸೇನೆಯಲ್ಲಿ ಕೆಲಸ ಮಾಡಿದ್ದರು. ಅವರು ಭಾರತಕ್ಕೆ ಮರಳುವ ಮುನ್ನ ಆಫ್ರಿಕಾ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಗಾಂಧೀಜಿಗೆ ಕಾಲ್ನಡಿಗೆಯೆಂದರೆ ಅಚ್ಚುಮೆಚ್ಚು. ಪ್ರತಿಭಟನೆಗಳ ವೇಳೆ ಅವರು ನಡೆಯುತ್ತಲೇ ಸಾಗಿದರೆ ಸಾವಿರಾರು ಜನರು ಅವರನ್ನು ಹಿಂಬಾಲಿಸುತ್ತಿದ್ದರು. ಗಾಂಧೀಜಿ ಅವರು ದಿನವೊಂದಕ್ಕೆ ಸರಾಸರಿ ೧೮ಕಿ.ಮೀ ನಡೆಯುತ್ತಿದ್ದರಂತೆ. ಈ ಅಂಕಿಅಂಶದ ಪ್ರಕಾರ ಅವರು ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ವಿಶ್ವವನ್ನು ಸುತ್ತಿದ್ದಕ್ಕೆ ಸಮನಾದ ದೂರವನ್ನು ನಡೆದೇ ಕ್ರಮಿಸಿದ್ದರು. ಗಾಂಧೀಜಿಯು ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧವೇ ಹೋರಾಡಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯನ್ನೂ ಆರಂಭಿಸಿದರು. ಕಾಲಕ್ರಮೇಣ ಬ್ರಿಟಿಷರು ಗಾಂಧೀಜಿಯ ಕುರಿತು ಮೃದುಧೋರಣೆ ತಾಳಿದರು. ಗಾಂಧೀಜಿಯ ಮರಣದ ೨೧ ವರ್ಷಗಳ ನಂತರ ಬ್ರಿಟನ್ ಸರಕಾರವು ಗಾಂಧೀಜಿಯವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಹೊರತಂದಿತು.
ಗಾಂಧೀಜಿಯು ಜನವರಿ ೩೦ ೧೯೪೮ ರಂದು ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ವಿಷಯವು ಕಾಡ್ಗಿಚ್ಚಿನಂತೆ ದೇಶವಿಡೀ ಹಬ್ಬಿತ್ತು. ಗಾಂಧೀಜಿಯ ಅಂತ್ಯಕ್ರಿಯೆಯನ್ನು ದಿಲ್ಲಿಯ ರಾಜಘಾಟ್‌ನಲ್ಲಿ ನೆರವೇರಿಸಿದಾಗ ಇವರ ಅಂತ್ಯಕ್ರಿಯೆಗೆ ದೇಶದ ಮೂಲೆಮೂಲೆಗಳಿಂದ ಜನರು ದಿಲ್ಲಿಗೆ ಧಾವಿಸಿ ಗಾಂಧೀಜಿಗೆ ಅಂತಿಮ ನಮನ ಸಲ್ಲಿಸಿದರು.
ಗಾಂಧೀಜಿಯ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಸುಮಾರು ೮ಕಿ.ಮೀ. ದೂರದವರೆಗೆ ಜನಸಾಗರ ರಸ್ತೆಯ ಇಕ್ಕೆಲಗಳಲ್ಲಿ ನಿಂತಿತ್ತು. ಮಹಾತ್ಮ ಗಾಂಧೀಜಿಯ ಶಾಂತಿಯ ಹೋರಾಟವು ಕೇವಲ ಭಾರತ ದ ಸ್ವಾತಂತ್ರ‍್ಯಕ್ಕಷ್ಟೇ ಸಹಾಯಕವಾಗಿರದೇ ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಗಾಂಧೀಜಿಯ ಶಾಂತಿಯ ಹೋರಾಟದ ನೆರವಿನಿಂದ ಸ್ವಾತಂತ್ರ‍್ಯವನ್ನು ಗಳಿಸಿದವು. ಪ್ರಪಂಚದ ೪ ಖಂಡಗಳ ೧೨ ದೇಶಗಳಲ್ಲಿ ಇವರ ಶಾಂತಿಯ ಸ್ವರೂಪದ ಸ್ವಾತಂತ್ರ‍್ಯದ ಹೋರಾಟದ ಕಿಚ್ಚು ಹೊತ್ತಿಕೊಂಡಿತು. ಈ ೧೨ ದೇಶಗಳು ಇಂದಿಗೂ ಸ್ವಾತಂತ್ರ‍್ಯ ಗಳಿಕೆಯ ಮಾರ್ಗ ಹಾಕಿಕೊಟ್ಟ ಗಾಂಧೀಜಿಯನ್ನು ಸ್ಮರಿಸುತ್ತವೆ.
ಮಹಾತ್ಮಾ ಗಾಂಧೀಜಿಗೆ ಶಾಂತಿಯ ಹರಿಕಾರರೆಂಬ ಹೆಸರಿದ್ದು, ಶಾಂತಿಯ ಹೋರಾಟದ ಮೂಲಕವೇ ಭಾರತಕ್ಕೆ ಸ್ವತಂತ್ರ ದೊರಕಿಸಿದವರು. ಅಷ್ಟೆಲ್ಲ ಸಾಧನೆಗಳನ್ನು ಗಾಂಧೀಜಿ ಮಾಡಿದ್ದರೂ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಮಾತ್ರ ದೊರೆಯಲೇ ಇಲ್ಲ ಎನ್ನುವುದು ಕುತೂಹಲಕರ ವಿಚಾರ. ಗಾಂಧೀಜಿ ಅವರನ್ನು ಒಟ್ಟು ಐದು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಮರಣೋತ್ತರ ನೊಬೆಲ್ ಪ್ರಶಸ್ತಿ ನೀಡಲು ಅವಕಾಶ ಇಲ್ಲವಾದ್ದರಿಂದ ಗಾಂಧೀಜಿಗೆ ನೊಬೆಲ್ ಪ್ರಶಸ್ತಿಯು ದೊರೆಯಲಿಲ್ಲ.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಾತ್ಮಾ ಗಾಂಧೀಜಿಯ ಜೀವನವೇ ನಮಗೆಲ್ಲರಿಗೂ ಒಂದು ಪಾಠವಾಗಿದೆ. ಅವರ ಬದುಕಿನ ಪ್ರತಿಯೊಂದು ಘಟನೆಗಳು ಮತ್ತು ಘಟ್ಟಗಳೂ ಜೀವನದ ಒಂದೊಂದು ಸಾರವನ್ನು ತಿಳಿಸುತ್ತವೆ. ಆದ್ದರಿಂದ ರಾಷ್ಟ್ರಪಿತನ ಕುರಿತಾಗಿ ಮತ್ತಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ ಅವುಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಸಭ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬಹುದು.

ಎಂತಹ ಸಂದರ್ಭ ಬಂದರೂ ಸುಳ್ಳು ಹೇಳಲಾರೆ
ಗಾಂಧೀಜಿಯವರ ಬಾಲ್ಯದ ಹೆಸರು ಮೋನು ಎಂದಾಗಿತ್ತು, ಇವರ ತಾಯಿ ಪುತಲೀಬಾಯಿಯು ಪ್ರತೀ ಮಳೆಗಾಲದ ಚಾತುರ್ಮಾಸದಲ್ಲಿ ಉಪವಾಸ ವೃತವನ್ನು ಮಾಡುತ್ತಿದ್ದರು. ಇವರು ತಮ್ಮ ಅನಾರೋಗ್ಯದ ಸಂದರ್ಭದಲ್ಲೂ ಸೂರ್ಯೋದಯವನ್ನು ಕಾಣದೆ ಆಹಾರವನ್ನು ಸ್ವೀಕರಿಸುತ್ತಿರಲಿಲ್ಲ.
ಒಂದು ದಿನ ತಾಯಿಯ ವೃತದ ಸಂದರ್ಭದಲ್ಲಿ ಆಕಾಶದಲ್ಲಿ ದಟ್ಟ ಮೋಡಗಳಿದ್ದವು. ಸೂರ್ಯ ಉದಯಿಸುವ ಸಮಯ ಆದರೂ ಮೋಡದ ಕಾರಣದಿಂದ ಸೂರ್ಯ ಕಾಣಿಸುತ್ತಿರಲಿಲ್ಲ. ತನ್ನ ತಾಯಿಯನ್ನು ಬೇಗ ಊಟ ಮಾಡಿಸುವ ಒಂದೇ ಆಸೆಯಿಂದ ಮೋನುವು ಉಪಾಯವನ್ನು ಮಾಡಿ, ತಾಯಿಗೆ ಕೇಳಿಸುವಂತೆ ಜೋರಾಗಿ ‘ಸೂರ್ಯ ಕಾಣಿಸಿದ, ಸೂರ್ಯ ಉದಯಿಸಿದ!’ ಎಂದು ಕಿರುಚುತ್ತಾ ಕೋಣೆಯೊಳಕ್ಕೆ ಓಡಿ ಬಂದ. ಆದರೆ ಮಗ ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ತಾಯಿಗೆ ತಿಳಿದಿತ್ತು. ಮಳೆಗಾಲದಲ್ಲಿ ಅದೂ ಆಗಸದಲ್ಲಿ ಕಪ್ಪು ಮೋಡಗಳು ಕವಿದಿರುವಾಗ ಸೂರ್ಯ ಕಾಣಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಮಗನ ಸುಳ್ಳಿಗೆ ಪಾಠ ಕಲಿಸಲು ತಾಯಿಯು ಒಂದು ಉಪಾಯ ಮಾಡಿದರು.
ಪುತಲೀಬಾಯಿಯು ತಮ್ಮ ಬಲಗೈಯನ್ನು ಮುಂದಕ್ಕೆ ಚಾಚಿ, ಮೋನು, ನಾನು ನನ್ನ ಕೈಯನ್ನು ಮುಂದಕ್ಕೆ ಚಾಚಿ ನಾನು ಕಣ್ಣು ಮುಚ್ಚಿಕೊಳ್ಳುವೆ. ಸೂರ್ಯ ಉದಯಿಸಿದ್ದನ್ನು ನೀನು ನೋಡಿರುವುದು ನಿಜವೇ ಆಗಿದ್ದರೆ ನನ್ನ ಕೈಯನ್ನು ನಿನ್ನ ಬಲಗೈಯಿಂದ ಮುಟ್ಟಬೇಕು, ನೀನು ಸುಳ್ಳು ಹೇಳಿದ್ದರೆ ನಿನ್ನ ಎಡಗೈಯಿಂದ ನನ್ನ ಚಾಚಿದ ಕೈಯನ್ನು ಮುಟ್ಟಬೇಕು. ‘ನೀನು ಹೇಳಿದ್ದು ನಿಜವೋ ಸುಳ್ಳೋ ಎನ್ನುವುದು ಕಣ್ಣು ಮುಚ್ಚಿಕೊಂಡಿರುವ ನನಗೆ ಕಾಣಿಸುವುದಿಲ್ಲ’ ಎಂದು ಹೇಳಿ ಕಣ್ಣು ಮುಚ್ಚಿಕೊಂಡರು.
ಮೋನುವಿಗೆ ತನ್ನ ತಪ್ಪಿನ ಅರಿವಾಗಿದ್ದರಿಂದ ತನ್ನ ತಾಯಿಯ ಕೈ ಮುಟ್ಟಲು ಭಯವಾಯಿತು. ಬಹಳ ಹೊತ್ತಾದರೂ ಮೋನುವು ತಮ್ಮ ಕೈಯನ್ನು ಮುಟ್ಟದೇ ಇದ್ದಾಗ ತಾಯಿಗೆ ಸಂತೋಷವಾಯಿತು. ತಪ್ಪನ್ನು ಒಪ್ಪಿಕೊಂಡ ಮಗನ ಬಗ್ಗೆ ಹೆಮ್ಮೆ ಅನಿಸಿಸಿ, ಮುಚ್ಚಿದ್ದ ತಮ್ಮ ಕಣ್ಣುಗಳನ್ನು ತೆರೆದು ‘ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಮಗು’ ಎನ್ನುತ್ತಾ ಮೋನುವನ್ನು ಎದೆಗೆ ಅಪ್ಪಿಕೊಂಡರು. ಮೋನುವು ‘ಎಷ್ಟೇ ಕಷ್ಟ ಎದುರಾದರೂ ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ’ ಎಂದು ಅಂದೇ ಶಪಥ ಮಾಡಿದ್ದನು.

