ವಿಜಯಪುರ: ನಗರದ ಅನೇಕ ಕಡೆ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಗೋಳಗುಮ್ಮಟ ಆವರಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ವಾಯು ವಿಹಾರಿಗಳ ಜೊತೆಗೆ ಸಭೆ ಹಾಗೂ ಕನಕದಾಸ ಬಡಾವಣೆಯಲ್ಲಿ ಪಾದಯಾತ್ರೆ ಮೂಲಕ ವಿಜಯಪುರ ನಗರ ಮತಕ್ಷೇತ್ರದ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ನಗರದ ವಿವಿಧೆಡೆ ಹೊಸ ಉದ್ಯಾನಗಳು ನಿರ್ಮಿಸಿದಲ್ಲದೆ, ಹಾಳಾಗಿದ್ದ ಉದ್ಯಾನಗಳನ್ನು ಮರು ಅಭಿವೃದ್ಧಿ ಪಡಿಸಲಾಗಿದೆ. ಮಕ್ಕಳಿಗೆ ಚಿಲ್ಡ್ರನ್ ಪಾರ್ಕ್, ಯುವಕರಿಗಾಗಿ ಓಪನ್ ಜಿಮ್ ಸಹ ಸ್ಥಾಪಿಸಲಾಗಿದೆ. ಇದರಿಂದ ವಾಯು ವಿಹಾರಿಗಳು ಮಕ್ಕಳೊಂದಿಗೆ ತೆರಳಿ ಸಮಯ ಕಳೆಯಲು ಅನುಕೂಲವಾಗಿದೆ. ತಂದೆ ಶ್ರಮದಿಂದ ವಿಜಯಪುರ ಉದ್ಯಾನ ನಗರವಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಮಕ್ಕಳು, ಮಹಿಳೆಯರು ನಿರ್ಭಯವಾಗಿ ಓಡಾಡುವ ವಾತಾವರಣ ಸೃಷ್ಟಿಸಿದ್ದಾರೆ. ಅವಮಾನಕ್ಕೆ ಒಳಗಾಗುತ್ತಿದ್ದ ನಮ್ಮ ಮಹಿಳೆಯರ ಅನುಕೂಲಕ್ಕಾಗಿ ಹಾಗೂ ರೈತರ ಹಿತದೃಷ್ಟಿಯಿಂದ ನಗರದ 35 ಕಡೆ ಕಾಯಿಪಲ್ಯ ಮಾರುಕಟ್ಟೆ ಮಾಡಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಪ್ರೇಮಾನಂದ ಬಿರಾದಾರ, ಉದ್ಯಮಿ ವಿಜಯಕುಮಾರ ಡೋಣಿ ಸೇರಿದಂತೆ ವಾಯು ವಿಹಾರಿಗಳು, ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು ಇದ್ದರು.