ಪತಿ ದಿ.ಶಿವಾನಂದ ಪಾಟೀಲ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ ಜೆಡಿಎಸ್‌ಅಭ್ಯರ್ಥಿ
ಸಿಂದಗಿ: ನನ್ನ ಪತಿ ದಿ.ಶಿವಾನಂದ ಪಾಟೀಲರ ಕನಸನ್ನು ನನಸು ಮಾಡುವುದು ಮತದಾರರ ಕೈಯಲ್ಲಿದೆ ಎಂದು ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಹೇಳಿದರು.
ಗುರುವಾರದಂದು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು, ಇಲ್ಲಿ ನೆರೆದಿರುವ ಜನರನ್ನು ನೋಡಿದರೆ ಶಿವಾನಂದ ಪಾಟೀಲರ ಕಾರ್ಯಗಳು ನೆನಪಿಗೆ ಬರುತ್ತವೆ. ಸಿಂದಗಿಯನ್ನು ಮಾದರಿ ಮತಕ್ಷೇತ್ರವನ್ನಾಗಿಸುವ ಅವರ ಕನಸನ್ನು ನನಸು ಮಾಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಮನೆ ಮಗಳಿಗೆ ಆಶೀರ್ವಾದ ಮಾಡಿ ಎಂದು ಭಾವುಕರಾದರು.
ಕುಮಾರಸ್ವಾಮಿಯವರ ಪಂಚರತ್ನ ಯೋಜನೆಗಳು ರೈತ ಪರ, ಜನ ಪರ ಯೋಜನೆಗಳಾಗಿವೆ. ಅವರು ಕ್ಷೇತ್ರವನ್ನು ದತ್ತು ಪಡೆಯುತ್ತೇನೆ ಎಂಬ ವಿಶ್ವಾಸವನ್ನು ನೀಡಿದ್ದಾರೆ. ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿದ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಅಭಿವೃದ್ದಿ ಶತಸಿದ್ದ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಪರ್ಸಂಟೇಜ್ ವ್ಯವಹಾರಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕಾರಣ ಮತದಾರರು ಈ ಬಾರಿ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಮುಖಂಡೆ ಸುನೀತಾ ದೇವಾನಂದ ಚವ್ಹಾಣ ಮಾತನಾಡಿ, ರಾಜ್ಯಕ್ಕೆ ಕುಮಾರಣ್ಣ ಮುಖ್ಯಮಂತ್ರಿ, ಕ್ಷೇತ್ರಕ್ಕೆ ವಿಶಾಲಾಕ್ಷಿ ಶಾಸಕಿ. ಈ ಬಾರಿ ಇವರ ಗೆಲುವು ಶತಸಿದ್ಧ ಎಂದು ಹೇಳಿದರು.
ಈ ವೇಳೆ ಚುನಾವಣಾ ಉಸ್ತುವಾರಿ ಆರ್ ಕೆ ಪಾಟೀಲ , ಆಲಮೇಲ ತಾಲೂಕು ಅಧ್ಯಕ್ಷ ಎಂ ಎನ್ ಉಸ್ತಾದ, ಮುಖಂಡರಾದ ಪ್ರಕಾಶ ಹಿರೇಕುರುಬರ , ಶೈಲಜಾ ಸ್ಥಾವರಮಠ, ಇಮಾಮ್ ನದಾಫ್ ಮತ್ತು ಕಾರ್ಯಕರ್ತರು ಇದ್ದರು.