ಮುಳವಾಡದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ
ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಖಿಲಗೌಡ ಪಾಟೀಲ್, ಸಂಗನಗೌಡ ಯಂಕಂಚಿ, ಪ್ರವೀಣ ಬುಟೆ, ಬಸವರಾಜ ಬಾಗೇವಾಡಿ, ಸಂಗಮೇಶ ಬಾಟಿ ಸೇರಿದಂತೆ 16 ಹಳ್ಳಿಗಳ ನೂರಾರು ಯುವಕರು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್ ದುರಾಡಳಿತ ಮತ್ತು ಜವಾಬ್ದಾರಿ ಮರೆತ ಶಾಸಕ ಶಿವಾನಂದ ಪಾಟೀಲರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಇಂದು ಸಾವಿರಾರು ಜನ ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು ಬಿಜೆಪಿ ಅಧಿಕಾರವಧಿಯಲ್ಲಿ. ಈ ಬಾರಿ ಮತಕ್ಷೇತ್ರದ ಜನ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದ ವಚನದಂತೆ ಮೂರನೇ ಹಂತದ ನೀರು ರೈತರ ಜಮೀನುಗಳಿಗೆ ಹರಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮತಕ್ಷೇತ್ರದ ಜನ ನನಗೆ ಮತ್ತೊಮ್ಮೆ ಕೊನೆಯ ಬಾರಿ ಆಶಿರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಯುವ ಮುಖಂಡ ಅಖಿಲಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ನಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ. ಶಾಸಕರು ಹಾಗೂ ಅವರ ಹಿಂಬಾಲಕರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ನಾನು ಸೇರಿ ಸಾವಿರಾರು ಯುವಕರು ಇಂದು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ್ದೇವೆ. ಬಿಜೆಪಿಯಲ್ಲಿ ದುಡಿಯುವವರಿಗೆ, ಯುವಕರಿಗೆ ಉತ್ತಮ ಭವಿಷ್ಯವಿದೆ. ನಮ್ಮ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಅವರ ಗೆಲುವಿಗಾಗಿ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸುತ್ತೇವೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಉತ್ತರಾಖಂಡ ರಾಜ್ಯಸಭಾ ಸದಸ್ಯ ನರೇಶ ಬನ್ಸಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ್, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಅಪ್ಪಣ್ಣ ಐಹೊಳ್ಳಿ, ಸಂಗಮೇಶ ವಾಡೇದ, ಹನುಮಂತ ಕಳಸಗೊಂಡ, ಜಗದೀಶ ಸುನಗದ ಸೇರಿ ಹಲವು ಪ್ರಮುಖರಿದ್ದರು.