ಇಂಡಿ: ದೇಶದ ಹಿತಕ್ಕಾಗಿ, ರಾಜ್ಯ ಮತ್ತು ಇಂಡಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ಲಿಂಬೆ ನಾಡಿನ ಬದಲಾವಣೆಗಾಗಿ, ಜನಪರ ಸರಕಾರ ರಚಿಸಲು, ಮೋದಿಜಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮನವಿ ಮಾಡಿದರು.
ತಾಲ್ಲೂಕಿನ ಹಿರೇಬೇವನೂರ, ಸಾತಲಗಾಂವ ಪಿ.ಐ, ಲಾಳಸಂಗಿ ಹಾಗೂ ಕೆಸರಾಳ ತಾಂಡಾಕ್ಕೆ ಗುರುವಾರ ಬೇಟಿ ನೀಡಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ನರೇಂದ್ರಮೋದಿಯವರ ಪ್ರತಿಯೊಂದು ಯೋಜನೆಗಳು ಪ್ರತಿ ಹಳ್ಳಿಗೂ ತಲುಪುವಲ್ಲಿ ಕೇಂದ್ರದಲ್ಲೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಇರುವ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದಿಂದ 6000 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4000 ಸಾವಿರ ಡಬಲ್ ಎಂಜಿನ್ ಸರಕಾರವಿದ್ದ ಕಾರಣದಿಂದಾಗಿ ನೇರವಾಗಿ ರೈತರ ಖಾತೆಗೆ ಒಟ್ಟು10000 ಸಾವಿರ ರೂಗಳು ತಲುಪುತ್ತಿದೆ.
ದೇಶದಲ್ಲಿ 70ವರ್ಷ ಆಡಳಿತ ನಡೆಸಿದರೂ ಹೈವೆ, ರೈಲ್ವೆ ಲೈನ್ ಅಲ್ಲ ಶೌಚಾಲಯಗಳನ್ನೂ ನಿರ್ಮಾಣ ಮಾಡದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ನೀಡಲು ಮುಂದಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಅಲೆ ಇದೆ. ಪರಿಶಿಷ್ಟಜಾತಿ ಮತ್ತು ಪಂಗಡದ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹನುಮಂತರಾಯಗೌಡ ಪಾಟೀಲ್, ಸಿದ್ದಲಿಂಗ ಹಂಜಗಿ, ಚನ್ನನಗೌಡ ಪಾಟೀಲ್, ಬಾತು ಸಾಗರ, ಬಿ.ಎಸ್ ಪಾಟೀಲ್, ರಾಜಶೇಖರ್ ಯರಗಲ್, ಕಾರ್ಯಕರ್ತರು ಹಾಗೂ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.