ಸಿಂದಗಿ: ಕಳೆದ ಉಪಚುನಾವಣೆಯಲ್ಲಿ ರಾಜ್ಯದ ಎಲ್ಲ ನಾಯಕರನೊಳಗೊಂಡು ಸಿಎಂ, ಮಂತ್ರಿ ಮಂಡಲ, ಸಂಸದರು, ಶಾಸಕರು ಬಂದು ದುಡ್ಡು ಹಂಚಿ ಕ್ಷೇತ್ರ ಗಿಟ್ಟಿಸಿಕೊಂಡಿದ್ದಾರೆ ಎಂದು ಬಸವನ ಬಾಗೇವಾಡಿ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಗಾಂಧೀಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಮೂಲಕ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಬಸವನಬಾಗೇವಾಡಿ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಅವರು ಮಾತನಾಡಿ, ಈ ದೇಶವನ್ನು ಹಿಂದುತ್ವದ ಆಧಾರದ ಮೇಲೆ ಆಳಲು ಹುಚ್ಚುತನಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಳದಿದ್ದಾರೆ. ಪ್ರಸ್ತುತ ಬಿಜೆಪಿ ಮಾಜಿ ಸಿಎಂ, ಸಂಸದರು, ಶಾಸಕರು ಪಕ್ಷವನ್ನೇ ಬಿಟ್ಟು ಬರುತ್ತಿದ್ದಾರೆ. ಈ ಚುನಾವಣೆಯ ಬಳಿಕ ರಾಜ್ಯದ ಜನ ಬಿಜೆಪಿಯನ್ನು ಕೈ ಬಿಡುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ 2000 ಹಣ, 200 ಯುನಿಟ್ ಉಚಿತ ವಿದ್ಯುತ್, ನೀರಾವರಿಗಾಗಿ 10 ಸಾವಿರ ಕೋಟಿ ಬದಲಾಗಿ 40 ಸಾವಿರ ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕಾAಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ತಂದೆಯವರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ಎಸ್.ಎಂ.ಪಾಟೀಲ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಮಾಜಿ ಜಿಪಂ ಸದಸ್ಯ ನರಸಿಂಗಪ್ರಸಾದ ತಿವಾರಿ, ರಾಕೇಶ ಕಲ್ಲೂರ, ಮಲ್ಲಣ್ಣ ಸಾಲಿ, ಬಸವರಾಜ ಯರನಾಳ, ಸುಶಾಂತ ಪೂಜಾರಿ, ಸುನಂದಾ ಯಂಪುರೆ, ಡಾ.ಶಾಂತವೀರ ಮನಗೂಳಿ, ಡಾ. ಚನ್ನವೀರ ಮನಗೂಳಿ ಸೇರಿದಂತೆ ಅನೇಕರು ಇದ್ದರು.