ಜಿಲ್ಲಾಡಳಿತ-ಜಿಲ್ಲಾ ಸ್ವೀಪ್ ಸಮಿತಿಯಿಂದ
ಮತದಾನ ಜಾಗೃತಿಯ ಮಾದರಿ ವಿದ್ಯುನ್ಮಾನ ಮತಯಂತ್ರ ಸ್ತಬ್ದಚಿತ್ರಕ್ಕೆ ಚಾಲನೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬುಧವಾರ “ಮಾದರಿ ವಿದ್ಯುನ್ಮಾನ ಮತಯಂತ್ರದ ಮತದಾನ ಜಾಗೃತಿಯ ಸ್ತಬ್ಧಚಿತ್ರ’ಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರತಿಶತ ೧೦೦ ರಷ್ಟು ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದೊಂದಿಗೆ ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಅರಿವು ಮೂಡಿಸಲಾಗುತ್ತಿದೆ. ಮತದಾರರು ಮತದಾನ ಮಾಡುವ ಮೂಲಕ ತಮ್ಮ ಮತಾಧಿಕಾರ ಚಲಾಯಿಸಬೇಕು. ನಗರವಾಸಿ, ಗ್ರಾಮವಾಸಿ ಮತ್ತು ಯುವ ಮತದಾರರು ಮತದಾನ ಮಾಡಬೇಕು ಎಂದು ಕರೆ ನೀಡಿದ ಅವರು, ಮಾದರಿ ವಿದ್ಯುನ್ಮಾನ ಮತಯಂತ್ರ ಹೊಂದಿರುವ ಮತದಾನ ಜಾಗೃತಿಯ ಈ ಸ್ತಬ್ಧಚಿತ್ರ ವಾಹನವು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ, ಮತದಾನದ ಮಹತ್ವ ಸಾರಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲಾ ಕೆಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಬಗೆಯ ಸ್ವೀಪ್ ಕಾರ್ಯಚಟುವಟಿಕೆ ಅನುಷ್ಠಾನಗೊಳಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದಲ್ಲಿ ಜನ ಸಹಭಾಗಿತ್ವದ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ವಿನೂತನವಾಗಿ ಕ್ಯಾಂಡಲ್ ಮಾರ್ಚ್, ವಿಕಲಚೇತನರಿಂದ ಬೈಕ್ ರ್ಯಾಲಿ, ಜಾನಪದ ಕಲಾ ತಂಡ, ಬೀದಿನಾಟಕ, ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ವಾಹನಗಳೊಂದಿಗೆ, ಮೆಹಂದಿ, ಚಿತ್ರ ಬಿಡಿಸುವ, ಸಾಂಪ್ರದಾಯಿಕ ವಾಹನ ಪದ್ಧತಿಯಾದ ‘ಟಾಂಗಾ’ ಮೂಲಕ ನಗರದಲ್ಲಿ ಸಂಚರಿಸಿ, ಮತದಾನದ ಘೋಷಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವಲ್ಲಿ ಸ್ವೀಪ್ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗಂಗಾಧರ ಹಿರೇಮಠ ಹಾಗೂ ಸಂಗೀತಾ ಮಠಪತಿ ಇವರು ‘ಚುನಾವಣೆ ಬಂತಪ್ಪ ಹತ್ತಿರ, ಓಟು ಹಾಕೋದು ನಾವು ನಿಖರ’ ಹಾಗೂ ‘ಮತವಾ ಹಾಕು ಮನುಜ, ಮತವಾ ಹಾಕು, ಚುನಾವಣೆ ದಿವಸ ಮತವಾ ಹಾಕು”ಎಂಬ ಮತದಾನದ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ವೈ. ಸುರಕೋಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಬಿ., ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರು ಹಾಗೂ ಜಿಪಂ ಯೋಜನಾ ವಿಭಾಗದ ಅಧಿಕಾರಿ ಎಬಿ ಅಲ್ಲಾಪೂರ, ವಿಜಯಪುರ ಡಯಟ್ ಕಾಲೇಜಿನ ಚಿತ್ರಕಲಾ ಶಿಕ್ಷಕ ಮಂಜುನಾಥ ಮಾನೆ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.