ದೇವರಹಿಪ್ಪರಗಿ: ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ತಮ್ಮ ತಮ್ಮ ಪಕ್ಷಗಳ ನಾಯಕರು, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಸೋಮನಗೌಡ ನಾಮಪತ್ರ ಸಲ್ಲಿಕೆ: ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಶಾಸಕ ಸೋಮನಗೌಡ ಪಾಟೀಲ ಸಾಸನೂರ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯ ಮೂಲಕ ಹೋರಟು ತಹಶೀಲ್ದಾರ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ(ಸಾಸನೂರ), ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕುಚಬಾಳ) ಬಿ.ಎಸ್.ಪಾಟೀಲ (ನಾಗರಾಳ ಹುಲಿ), ಪಂಚಮಸಾಲಿ ಸಮುದಾಯದ ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಪಕ್ಷ ಜಯಗಳಿಸಲು ಸಹಕಾರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಪ್ರದೇಶದ ಮಾಜಿಸಚಿವ ಆನಂದ ಸ್ವರೂಪ ಶುಕ್ಲಾಜೀ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಸುರೇಶ ಬಿರಾದಾರ, ಸಿದ್ದು ಬುಳ್ಳಾ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಸಹಸ್ರಾರು ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ಸಿನಿ0ದ ಶರಣಪ್ಪ ಸುಣಗಾರ ನಾಮಪತ್ರ ಸಲ್ಲಿಕೆ
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಅಭ್ಯರ್ಥಿ ಶರಣಪ್ಪ ಸುಣಗಾರ ನೇತೃತ್ವದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ಹೊರಟು ತಹಶೀಲ್ದಾರ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಶರಣಪ್ಪ ಸುಣಗಾರ ಮಾತನಾಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಪಕ್ಷ ನನಗೆ ಅವಕಾಶ ನೀಡಿರುವುದನ್ನು ಕ್ಷೇತ್ರದ ಅಹಿಂದ ಸಮುದಾಯ ಸ್ವಾಗತಿಸಿ ಇಂದು ಅಪೂರ್ವ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಈ ಚುನಾವಣೆಯಲ್ಲಿ ೧೦ ಸಾವಿರ ಮತಗಳ ಅಂತರದ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಡಿನಾಡು ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಷೀರ್ ಅಹ್ಮದ್ ಬೇಪಾರಿ, ಬಾಳನಗೌಡ ಪಾಟೀಲ(ಸಾತಿಹಾಳ) ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಆನಂದಗೌಡ ದೊಡ್ಡಮನಿ, ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಮಲ್ಲನಗೌಡ ಬಿರಾದಾರ, ಸೋಮನಾಥ ಕಳ್ಳಿಮನಿ, ಸಂಗಮೇಶ ಛಾಯಾಗೋಳ, ಸರಿತಾ ನಾಯಿಕ್ ರಮೀಜಾ ನದಾಫ್, ಲಲಿತಾ ದೊಡಮನಿ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.