ವಿಜಯಪುರ: ರಾಜಕಾರಣದಲ್ಲಿ ಜಾತಿ ಬರಬಾರದು. ಜಾತ್ಯತೀತ ನಾಯಕರನ್ನು ಎಲ್ಲ ಸಮುದಾಯದವರು ಒಕ್ಕೊರಲಿನಿಂದ ಬೆಂಬಲಿಸಬೇಕು ಎಂದು ಜಯಬಸವ ಕುಮಾರ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಲ್ಲಿಕಾರ್ಜುನ ಎಸ್. ಲೋಣಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿಯನ್ನು ಜಾತಿಯಿಂದ ನೋಡಬಾರದು. ಅಭಿವೃದ್ಧಿ ಮತ್ತು ದೂರದೃಷ್ಠಿ ಹೊಂದಿರುವ ನಾಯಕರಿಗೆ ಎಲ್ಲ ಸಮುದಾಯ ಬೆನ್ನೆಲುಬಾಗಿ ನಿಲ್ಲಬೇಕು. ಮನುಷ್ಯನಿಗೆ ಕೃತಜ್ಞತೆ ಇರಬೇಕು. ಆದರೆ, ಜಾತಿ ರಾಜಕಾರಣಿಗಳಿಗೆ ಇದು ಅರ್ಥವಾಗುವುದಿಲ್ಲ. ಜಾತ್ಯತೀತ ನಾಯಕರನ್ನು ಉನ್ನತ ಸ್ಥಾನಕ್ಕೇರಿಸಲು ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ಎಂ. ಬಿ. ಪಾಟೀಲರು ಹೃದಯ ವೈಶಾಲ್ಯತೆ ಹೊಂದಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಜನಿತವಾಗಿವೆ. ಸಂಗಾಪುರ ಎಸ್.ಎಚ್ ಗ್ರಾಮದಲ್ಲಿ ರೈತರು ಅವರ ಪುತ್ಥಳಿ ಸ್ಥಾಪಿಸಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರಕಾರದಲ್ಲಿ ಎಂ. ಬಿ. ಪಾಟೀಲರು ಪ್ರಮುಖ ಸ್ಥಾನದಲ್ಲಿರುತ್ತಾರೆ. ನಮಗೆಲ್ಲರಿಗೂ ಅವರೇ ಗಾಡ್ ಫಾದರ್. ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಬಸವಣ್ಣನವರು ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ತತ್ವಾದರ್ಶಗಳಡಿ ಕೆಲಸ ಮಾಡುತ್ತಿದ್ದೇನೆ. ನಾನು ಅಧಿಕಾರದಲ್ಲಿದ್ದಾಗ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಎಲ್ಲ ಸಮುದಾಯಗಳ ಹಿತ ಕಾಪಾಡುತ್ತಿದ್ದೇನೆ. ಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನನಗೆ ಸಿಕ್ಕ ಸಚಿವ ಸ್ಥಾನದ ಅವಧಿಯಲ್ಲಿ ಶಕ್ತಿಮೀರಿ ಕೆಲಸ ಮಾಡಿ, ಅಭಿವೃದ್ಧಿ ಮಾಡಿದ್ದೇನೆ. ನಾನು ಮಾಡುವ ಕೆಲಸಗಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಉದ್ಯಮಿ ಶರಣಬಸು ಅರಕೇರಿ ಮತ್ತು ರಾಮನಿಂಗ ಬಿರಾದಾರ ಮಾತನಾಡಿ ಎಲ್ಲ ಸಮಾಜಗಳನ್ನು ಪ್ರೀತಿಯಿಂದ ಕಾಣುವ ಗುಣ ಎಂ. ಬಿ. ಪಾಟೀಲ ಅವರಲ್ಲಿ ಇದೆ. ನಾವೇಲ್ಲರೂ ಅವರ ಜೊತೆಗೆ ಇದ್ದೇವೆ ಅವರು ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.
ಎಂ. ಬಿ. ಪಾಟೀಲರ ದೂರದೃಷ್ಠಿಯ ಪರಿಣಾಮವಾಗಿ ಕಾಗೆಯೂ ಕೂಡದ ಬರಡು ಗುಡ್ಡಗಾಡು ಪ್ರದೇಶದಲ್ಲಿ ಈಗ ಜಲ ಸಮೃದ್ಧಿ ನೆಲಸಿದ್ದು, ನವೀಲುಗಳು ಕುಣಿದಾಡುವ ವಾತಾವರಣ ಸೃಷ್ಠಿಯಾಗಿದೆ. ಅವರ ತಂದೆ ಬಿ. ಎಂ. ಪಾಟೀಲ ಶೈಕ್ಷಣಿಕ ಕ್ರಾಂತಿ ಮಾಡಿ ಲಕ್ಷಾಂತರ ಜನರಿಗೆ ಶಿಕ್ಷಣ, ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಸಾವಿರಾರು ಜನರ ಬದುಕು ರೂಪಿಸಿದ್ದಾರೆ. ಈಗ ಎಂ. ಬಿ. ಪಾಟೀಲರು ಮಾಡಿರುವ ನೀರಾವರಿಯಿಂದಾಗಿ ರೈತರು ಕೊಳವೆ ಭಾವಿ ಕೊರೆಸುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಅಂತರ್ಜಲ ಹೆಚ್ಚಾಗಿ ಬತ್ತಿದ ಬೋರವೆಲ್‍ಗಳಲ್ಲಿ ಗಂಗೆ ಉಕ್ಕಿ ಹರಿಯುತ್ತಿದ್ದಾಳೆ ಎಂದು ಹೇಳಿದರು.
ರೂಗಿಯ ಸುಗಲಮ್ಮ ತಾಯಿ ಮಾತನಾಡಿ, ಈಗ ಪ್ರತಿಯೊಬ್ಬ ರೈತರು ಎಂ. ಬಿ. ಪಾಟೀಲರು ಮಾಡಿರುವ ನೀರಾವರಿ ಯೋಜನೆಗಳನ್ನು ಕೊಂಡಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಜಗದೀಶ ಪಾಟೀಲ, ಪರಮಾನಂದ ಬಗಲಿ, ಎನ್.ಎಸ್.ಲೋಣಿ, ಬಿ. ಎಂ. ಪಾಟೀಲ ಕತ್ನಳ್ಳಿ, ಜಿ. ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಉಪಾಧ್ಯಕ್ಷ ಬಾಬು ಸಾಹುಕಾರ ಮೇತ್ರಿ, ಮುಖಂಡರಾದ ಬಿ. ಪಿ. ಪಾಸೋಡಿ, ಬಾಗೀರಥಿ ತೇಲಿ ಮುಂತಾದವರು ಉಪಸ್ಥಿತರಿದ್ದರು.