ಚಡಚಣ: ನಾನು ನಾಗಠಾಣ ಕ್ಷೇತ್ರದ ಅಭ್ಯರ್ಥಿ ಅಲ್ಲ, ಕಾರ್ಯಕರ್ತರಾದ ಪ್ರತಿಯೊಬ್ಬರೂ ಅಭ್ಯರ್ಥಿ ಇದ್ದೀರಿ. ಹಾಗಾಗಿ ನಿಮ್ಮ ಗೆಲುವು ನಿಮ್ಮ ಕೈಯಲ್ಲೇ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ವಿಶ್ವಾಸ ತುಂಬಿದರು.
ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.
ಎಲ್ಲರೂ ಸಹಕರಿಸಿಕೊಂಡು ಚುನಾವಣೆ ಎದುರಿಸಬೇಕು. ಒಬ್ಬರಿಗೊಬ್ಬರು ಕೋಆರ್ಡಿನೇಟ್ ಮಾಡಿಕೊಂಡು ಆಯಾ ಜಿಪಂ ವ್ಯಾಪ್ತಿಯ ತಂಡಗಳು ಕಾರ್ಯನಿರ್ವಹಿಸಬೇಕು. ಜಿಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳ ಮರದಾರರರನ್ನು ತಲುಪಬೇಕು ಎಂದರು. ದೊಡ್ಡದಾದ ಕ್ಷೇತ್ರ ಇರುವುದರಿಂದ ನನಗೊಬ್ಬನಿಗೆ ಎಲ್ಲೆಡೆ ತಲುಪಲಾಗುವುದಿಲ್ಲ. ಆದ್ದರಿಂದ ತಾವೆಲ್ಲ ಕಾರ್ಯಕರ್ತರೇ ಅಭ್ಯರ್ಥಿ ನೀವೇ ಎಂದು ತಿಳಿದು ಎಲ್ಲರನ್ನು ಭೇಟಿಯಾಗಿ ಮತಯಾಚಿಸಬೇಕು. ಗ್ರಾಪಂನಿಂದ ಹಳ್ಳಿ ಹಳ್ಳಿ, ಅಲ್ಲಿಂದ ತಾಪಂ ಮತ್ತೆ ಜಿಪಂ ವರೆಗೆ ನೀವು ಪ್ರತಿ ಮತದಾರ ಎಲ್ಲಿದ್ದಾರೆ ಎಂದು ಗುರುತಿಸಿ ಅವರನ್ನು ಬೂತ್‌ಗೆ ತರುವ ಜವಾಬ್ದಾರಿ ನಿಮ್ಮದು. ಮನೆ ಮನೆ ತಲುಪಿ ಮತದಾರರನ್ನು ಕಾಂಗ್ರೆಸ್ ಕಡೆಗೆ ಸೆಳೆದು, ಆ ಅಲೆಯಲ್ಲಿ ಪಕ್ಷವನ್ನು ಅಧಿಕಾರದ ದಡ ಮುಟ್ಟಿಸಬೇಕು ಎಂದು ಕೇಳಿಕೊಂಡರು.
ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಡಿ.ಹಕ್ಕಿ ಪ್ರಾಸ್ತಾವಿಕ ಮಾತನಾಡಿ, ಚುನಾವಣೆ ತಯಾರಿ ಕುರಿತು ವಿವರಿಸಿದರು. ಜಿಪಂ ವಾರು ವಹಿಸಿದ ಜವಾಬ್ದಾರಿಗಳ ಪಟ್ಟಿ ಓದಿದರು. ಮೂರು ಜಿಪಂಗಳಲ್ಲಿ ಹೆಚ್ಚಿನ ಶ್ರಮ ಹಾಕಿ ಕಾಂಗ್ರೆಸ್ ಪಕ್ಷವನ್ನು ಜಯಶಾಲಿಯಾಗಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುರೇಶ ಪಾಟೀಲ, ಹಿರಿಯ ಮುಖಂಡ ಎಮ್. ಆರ್. ಪಾಟೀಲ, ಚಡಚಣ ಬ್ಲಾಕ್ ಮಹಿಳಾ ಅಧ್ಯಕ್ಷೆ ಭಾಗ್ಯಶ್ರೀ ಮಸಳಿಕೇರಿ, ಮುಖಂಡರಾದ ಜಿ.ಎಸ್. ಪವಾರ್, ಸುರೇಶ ಬಗಲಿ, ಜಾಲತಾಣದ ಜಿಲ್ಲಾ ಮುಖ್ಯಸ್ಥ ಪ್ರಕಾಶ ಪಾಟೀಲ, ಮಹಾದೇವಣ್ಣ, ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ರಾಜು ಸಿಂಘೆ, ರಫೀಕ್ ಮಕಾನದಾರ, ರಾವುಸಾಹೇಬಗೌಡ ಅನೇಕರಿದ್ದರು.
Related Posts
Add A Comment