ದ್ಯಾಬೇರಿ: ‘ನಮಗ ರೊಕ್ಕಾ ಬ್ಯಾಡ, ರುಪಾಯಿ ಬ್ಯಾಡ.. ನಮ್ಮ ನಾಗಠಾಣ ಕ್ಷೇತ್ರ ಮತ್ತ ನಮ್ಮೂರಿಗಿ ಛೊಲೊ ಆದರ ಸಾಕು’ ಎಂದು ಪ್ರಗತಿ ಪರ ರೈತ ಮಲ್ಲು ನಾಗರಬೋಜಿ ಹೇಳಿದರು.
ಇಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಪರವಾದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾವು ಆಮಿಷಕ್ಕೆ ಬಲಿಯಾಗದೇ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮೊದಲು ನಾವು ದ್ಯಾಬೇರಿಯಿಂದ ವಿಜಯಪುರಕ್ಕೆ ಮದಭಾವಿ ಮೇಲಿಂದ ಹೋಗುತ್ತಿದ್ದೆವು. ಈಗ ಚುನಾವಣೆ ಬಂದಿದೆ ಎಂದು ಅಲಿಯಾಬಾದ್ ರಸ್ತೆ ಸರಿ ಮಾಡಿದ್ದಾರೆ. ಇಷ್ಟು ದಿನ ಏಕೆ ರಸ್ತೆ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಟಕದೊಂಡರಿಗೆ ಯಾವ ಆಸೆಗಳಿಲ್ಲ. ಅವರು ಯಾವತ್ತೂ ಜನಪರವಾಗಿದ್ದಾರೆ. ಇವರು ಗೆದ್ದರೆ ನಾವು ಉದ್ಧಾರವಾಗುತ್ತೇವೆ. ನಾವು ದುಡ್ಡಿನ ಆಸೆಗೆ ಬಲಿಯಾಗಿ ಯಾರಿಗೋ ಮತ ಹಾಕಬಾರದು ಎಂದರು.
ಈ ಹದಿನೈದು ದಿನ ನಿಮ್ಮನ್ನು ನಾವು ಆಕಾಶದಾಗ ತೇಲಿಸಿ ಬಿಡುತ್ತೇವೆ. ಪ್ರಜೆಗಳೇ ಪ್ರಭುಗಳು ಅನ್ನೋದು ಮರೆಯಾಗಿ ನೀವೇ ಸೇವಕರಾಗೀರಿ, ನಾವೇ ಮಾಲೀಕರಾಗೀವಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಸಂಕಟದಿಂದ ಹೇಳಿದರು.
ನನಗೇ ಮತ ಹಾಕಿ ಎಂದು ನಾನು ಕೇಳುವುದಿಲ್ಲ. ನೀವು ಯೋಚಿಸಿ ನಿರ್ಧಾರ ಮಾಡಿ. ಇದು ನನ್ನ ಜೀವನದ ಕೊನೆಯ ಚುನಾವಣೆ ಎಂದರು.
ಅಮಸಿದ್ಧಗೌಡ ಬಿರಾದಾರ, ಆರ್.ಡಿ. ಹಕ್ಕಿ, ಬ್ಲಾಕ್ ಅಧ್ಯಕ್ಷ ಶಹಜಾನ್ ಮುಲ್ಲಾ, ಚಂದ್ರಶೇಖರ ಅರಕೇರಿ, ಶಿವನಗೌಡ ಪಾಟೀಲ ಅನೇಕರು ಇದ್ದರು.
‘ಯಾರದೂ ರೊಕ್ಕ ಬ್ಯಾಡ, ರುಪಾಯಿ ಬ್ಯಾಡ ನಮಗ ನಾಗಠಾಣ ಛೊಲೊ ಆದ್ರ ಸಾಕು!’
Related Posts
Add A Comment