ವಿಜಯಪುರ: ಆರ್ಥಿಕವಾಗಿ ಹಿಂದುಳಿದ ಮತ್ತು ಸರ್ವ ಜನರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಎಲ್ಲ ಸ್ವಾಭಿಮಾನಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇನೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ.
ನಗರದಲ್ಲಿ ನಡೆದ ನಾನಾ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ನಿಷ್ಠೆಯಿಂದ ಕೆಲಸ ಮಾಡುತ್ತ ಇತರ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸುತ್ತಿರುವವರು ಯಾವುದೇ ಹಿಂಜರಿಕೆ ಇಲ್ಲದೆ ನಿರಾತಂಕವಾಗಿ ತಮ್ಮ ಕಾಯಕ ಮುಂದುವರೆಸಬೇಕು ಎಂದು ಹೇಳಿದರು.
ಹಿಂದುಳಿದವರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಆರ್ಥಿಕವಾಗಿ ಸ್ವಾವಲಂಭಿಯಾಗಬೇಕು. ಈ ಹಿಂದಿನಿಂದಲೂ ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಜನರ ಬಗ್ಗೆ ನಮಗೂ ಹೆಮ್ಮೆ ಮತ್ತು ಕಾಳಜಿ ಇದೆ ಎಂದು ಅವರು ಹೇಳಿದರು.
ಕುಡಿಯಲು ನೀರಿಗಾಗಿ ಪರದಾಡುತ್ತಿದ್ದ ರೈತರ ಭೂಮಿಗೆ ನೀರೊದಗಿಸುವ ಮೂಲಕ ಮುಂದಿನ ಪೀಳಿಗೆಗೂ ನೆಮ್ಮದಿಯಿಂದ ಬದುಕು ಸಾಗಿಸಲು ಶಾಶ್ವತ ಪರಿಹಾರ ಒದಗಿಸಿದ್ದೇವೆ. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಿದ್ದೇವೆ. ರೈತರು ವೈಜ್ಞಾನಿಕವಾಗಿ ಕೃಷಿ ಮಾಡಲು ಮಾಹಿತಿ ಕೇಂದ್ರ ಆರಂಭಿಸಲಿದ್ದೇವೆ. ಭೂರಹಿತರಿಗಾಗಿಯೂ ಯೋಜನೆ ರೂಪಿಸಲಿದ್ದೇವೆ. ಶಾಲೆಗಳು ಮತ್ತು ಅಂಗನವಾಡಿಗಳ ಅಭಿವೃದ್ಧಿ, ರೈತರಿಗಾಗಿ ವಿಜಯಪುರವನ್ನು ಆದರ್ಶ ಜಿಲ್ಲೆ ಮತ್ತು ಬಬಲೇಶ್ವರ ಆದರ್ಶ ಮತಕ್ಷೇತ್ರವನ್ನು ಮಾಡುವ ಗುರಿ ಹೊಂದಿದ್ದೇನೆ ಎಂದು ಅವರು ಹೇಳಿದರು.
ಗುರು ತುಪ್ಪದ, ಸಿದ್ರಾಮ ಬಿರಾದಾರ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ನೀರು ಮತ್ತು ವಿದ್ಯೆಯನ್ನು ಒದಗಿಸುವ ಮೂಲಕ ಎಂ. ಬಿ. ಪಾಟೀಲ ಸರ್ವ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಮಹಿಳೆಯರ ಗೋಳನ್ನು ತಪ್ಪಿಸಿದ್ದಾರೆ. ನಮ್ಮ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ(ನಿಡೋಣಿ) ಮತ್ತು ಮುಖಂಡ ರಾಜು ಜೋರಾಪುರ ಮಾತನಾಡಿ, ಹಲವಾರು ಜನರು ಎಲೆಮರೆಯ ಕಾಯಿಯಂತೆ ಸ್ವಾಭಿಮಾನದ ಜೀವನ ಸಾಗಿಸುತ್ತಿದೆ. ಸಂಕಷ್ಟ ಸಮಯದಲ್ಲಿ ಎಂ. ಬಿ. ಪಾಟೀಲರೇ ನಮ್ಮ ಆಪದ್ಭಾಂದವರಾಗಿದ್ದಾರೆ. ವೈಯಕ್ತಿಕ ಜೀವನ ಬದಿಗೊತ್ತಿ ನಮ್ಮ ಜೀವನ ಹಸನಾಗಿಸಲು ಕಾರಣರಾಗಿದ್ದಾರೆ ಎಂದು ಹೇಳಿದರು.
ಆಶಾ ಎಂ. ಪಾಟೀಲ ಮಾತನಾಡಿ, ನಾನು ನಿಮ್ಮಲ್ಲಿ ಒಬ್ಬಳಾಗಿ ಸಣ್ಣ ಕೆಲಸ ಮಾಡುತ್ತಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಕಾರಣರಾದ ಎಂ. ಬಿ. ಪಾಟೀಲ ಅವರನ್ನು ಎಲ್ಲರೂ ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಡಾ.ಗಂಗಾಧರ ಸಂಬಣ್ಣಿ, ರಾಚನಗೌಡ ಬಿರಾದಾರ, ರೇವಣಸಿದ್ದ ಜುಮನಾಳ, ಬಸನಗೌಡ ಪಾಟೀಲ ಉಪಸ್ಥಿತರಿದ್ದರು.
ಸೋಮನಿಂಗ ಕಟಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಮಮದಾಪುರ ನಿರೂಪಿಸಿದರು.