ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ | ಮೆರವಣಿಗೆ
ದೇವರಹಿಪ್ಪರಗಿ: ಜೆಡಿಎಸ್ ಅಭ್ಯರ್ಥಿ ಭೀಮನಗೌಡ(ರಾಜುಗೌಡ) ಪಾಟೀಲ, ಕುದರಿ ಸಾಲವಾಡಗಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಟಿಪ್ಪುಸುಲ್ತಾನ ವೃತ್ತದಲ್ಲಿ ಮಂಗಳವಾರ ರಾಜುಗೌಡ ಪಾಟೀಲ ನೇತೃತ್ವದಲ್ಲಿ ಸಭೆ ಸೇರಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯ ಮೂಲಕ ಹೋರಟು ತಹಶೀಲ್ದಾರ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ರಾಜುಗೌಡ ಪಾಟೀಲ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರವಧಿಯಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳು, ಪಂಚರತ್ನ ಯೋಜನೆಗಳು ಈ ಬಾರಿ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿವೆ. ಜೊತೆಗೆ ಕಳೆದ ಎರಡು ಚುನಾವಣೆಯಲ್ಲಿ ಕೆಲವೇ ಅಂತರದ ಮತಗಳ ಸೋಲು ನನಗೆ ಸಾಕಷ್ಟು ಪಾಠ ಕಲಿಸಿದೆ. ಈ ಬಾರಿ ಕ್ಷೇತ್ರದ ಮತದಾರರು ಅಭಿವೃದ್ಧಿ ಹಾಗೂ ಅನುಕಂಪದ ಮೂಲಕ ನನಗೆ ಅಪಾರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ನನಗೂ ಸಹ ಕ್ಷೇತ್ರದ ಜನತೆಯ ನಾಡಿಮಿಡಿತ ಅರ್ಥವಾಗಿದ್ದು, ಖಂಡಿತವಾಗಿಯೂ ಈ ಬಾರಿ 10 ಸಾವಿರ ಮತಗಳ ಅಂತರದಿAದ ಗೆಲ್ಲುವ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಮತಕ್ಷೇತ್ರದ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಜಲಕತ್ತಿ, ಶಾಂತಯ್ಯ ಜಡಿಮಠ, ಸಿಂಧೂರ ಡಾಲೇರ್, ಶೇಖರಗೌಡ ಪಾಟೀಲ(ಕೋರವಾರ), ಯುವಘಟಕದ ಅಧ್ಯಕ್ಷ ಮುನೀರ್ ಅಹ್ಮದ್(ಮುನ್ನಾ) ಮಳಖೇಡ, ಎ.ಡಿ.ಮುಲ್ಲಾ, ರಾಘವೇಂದ್ರ ಗುಡಿಮನಿ, ವೀರೇಶ ಕುದರಿ, ಚಂದು ಗುಂಡಾನವರ, ಹೂವಿನಹಿಪ್ಪರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರುಗೇಶ ತಾಳಿಕೋಟಿ, ಸಿದ್ದು ಹಾದಿಮನಿ, ಎನ್.ಬಿ.ರೋಡಗಿ(ಮುಳಸಾವಳಗಿ), ಕಲ್ಲನಗೌಡ ಪಾಟೀಲ, ಗುರನಗೌಡ ಪಾಟೀಲ (ಕುದರಿ ಸಾಲವಾಡಗಿ) ರಫೀಕ್ ಪಾನಪರೋಷ, ಉಸ್ಮಾನಸಾಬ್ ಹಚ್ಯಾಳ, ಜಬ್ಬರ್ ಮೋಮಿನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮತಕ್ಷೇತ್ರದ ವಿವಿಧ ಗ್ರಾಮಸ್ಥರು ಇದ್ದರು.