ವಿವಿಧ ಗ್ರಾಪಂಗಳಿಗೆ ಜಿಪಂ ಸಿಇಓ ಶಿಂಧೆ ಭೇಟಿ, ಪರಿಶೀಲನೆ
ವಿಜಯಪುರ: ಮೇ.10ರಂದು ನಡೆಯುವ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು. ಮಂಗಳವಾರು ನಿಡಗುಂದಿ ತಾಲೂಕಿನ ವಂದಾಲ ಮತ್ತು ಗೊಳಸಂಗಿ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿವಿಧ ಕಾಮಗಾರಿ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರಿಗೆ ಮತದಾನದ ಮಹತ್ವದ ಕುರಿತು ತಿಳಿ ಹೇಳಿದರು.
ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ, ಅವರ ಕುಂದು ಕೊರತೆ ಆಲಿಸಿದರು.
ಕಾಮಗಾರಿಯ ಸ್ಥಳದಲ್ಲಿಯೇ ರಂಗೋಲಿ ಮೂಲಕ “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ, ಕೂಲಿ ಕೆಲಸಕ್ಕೂ ಸೈ, ಮೇ 1೦ಕ್ಕೆ ಮತದಾನಕ್ಕೂ ಸೈ, ಸ್ವೀಪ್ ಚಟುವಟಿಕೆಯ ಜಾಗೃತಿ ಚಿತ್ರಗಳನ್ನು ಬಿಡಿಸಿ ಮತದಾನ ಅರಿವು ಮೂಡಿಸಿ, ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ತಾಲೂಕಿನ ಗೊಳಸಂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಣೆ ಮಾಡಿದರು. ಕಾಮಗಾರಿ ಅನುಷ್ಠಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗುಣಮಟ್ಟದಿಂದ ಕೂಡಿರುವ ಕಾಮಗಾರಿ ಅನುಷ್ಟಾನಕ್ಕೆ ಆದ್ಯತೆ ನೀಡಬೇಕು. ತಪ್ಪಿದಲ್ಲಿ ಕಟ್ಟು-ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಹೈಟೆಕ್ ಶೌಚಾಲಯ ವೀಕ್ಷಣೆ ಮಾಡಿ, ಸ್ಥಾಪಿಸಲಾದ ಮತಗಟ್ಟೆಗಳ ಪರಿಶೀಲನೆ ಮಾಡಿದರು. ತದ ನಂತರ, ಹುಣಶ್ಯಾಳ ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.