ಬಾಡೂಟದಲ್ಲಿ ಪಾಲ್ಗೊಂಡ ಶಿಕ್ಷಕರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ದಾಖಲು | ಕ್ರಮಕ್ಕೆ ಆಗ್ರಹ
ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯು ಅಲ್ಲಿಯ ಚುನಾವಣೆ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳಿಗೆ, ಬೂತ್ ಮಟ್ಟದ ಶಿಕ್ಷಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಸೆ-ಆಮಿಷಗಳನ್ನು ಒಡ್ಡುವ ಮೂಲಕ ಚುನಾವಣೆಯಲ್ಲಿ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಹುನ್ನಾರ ಹೊಂದಿದ್ದಾರೆAದು ಬಬಲೇಶ್ವರ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿಯು ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯ ಶಿಕ್ಷಕರಿಗೆ ದ್ಯಾಬೇರಿ ಗ್ರಾಮದ ತೋಟವೊಂದರಲ್ಲಿ ಔತಣಕೂಟದ ನೆಪದಲ್ಲಿ ಬಾಡೂಟ ಮತ್ತು ಮದ್ಯದ ಪಾರ್ಟಿ ಏರ್ಪಡಿಸಿ ಅವರಿಂದ ಚುನಾವಣೆಯಲ್ಲಿ ಗೋಲ್‌ಮಾಲ್ ಮಾಡಿಸುವ ಯೋಜನೆ ಹೊಂದಿದ್ದಾರೆ. ಕೆಎ ೦೧ ಎಂಕ್ಯೂ ೮೬೯೬ ನಂಬರಿನ ಶಿಕ್ಷಕರ ಸಂಘದ ಇನ್ನೋವಾ ಕಾರು ಸೇರಿದಂತೆ ಹಲವು ವಾಹನಗಳಲ್ಲಿ ಬಿಎಲ್‌ಓಗಳು ಆಗಮಿಸಿದ್ದರು. ಈ ಬಾಡೂಟದಲ್ಲಿ ಶಿಕ್ಷಕಿಯರೂ ಪಾಲ್ಗೊಂಡಿದ್ದರು ಎಂಬುದಕ್ಕೆ ಅಲ್ಲಿ ನಡೆದ ದೃಶ್ಯಗಳು ವಿಡಿಯೋ ಚಿತ್ರೀಕರಣವೇ ಸಾಕ್ಷಿ ಎಂದು ಮಾಧ್ಯಮದವರೆದುರು ಘಟನಾವಳಿಗಳ ವಿಡಿಯೋ ಪ್ರದರ್ಶಿಸಿದರು.
ನೀರಾವರಿ ಹರಿಕಾರ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿಯು ಈ ರೀತಿ ಕೆಳಮಟ್ಟದ ರಾಜಕಾರಣ ಮಾಡಲು ಅವರಿಗೆ ಮನಸ್ಸಾದ್ರೂ ಹೇಗೆ ಬಂತು ಎಂದು ಪ್ರಶ್ನಿಸಿದ ಅವರು, ಈ ಕುರಿತು ಜಿಲ್ಲಾಡಳಿತಕ್ಕೆ ಹಾಗೂ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದು. ಔತಣಕೂಟದಲ್ಲಿ ಪಾಲ್ಗೊಂಡವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಬಾಡೂಟದಲ್ಲಿ ಭಾಗಿಯಾದ ಸಿಬ್ಬಂದಿ ತಮ್ಮ ಮತಕ್ಷೇತ್ರದಲ್ಲಿ ಚುನಾವಣೆ ಕಾರ್ಯ ಕೈಗೊಳ್ಳಲು ಅನುಮತಿಸಬಾರದೆಂದು ಚುನಾವಣಾಧಿಕಾರಿಗೆ ಕೇಳಿಕೊಳ್ಳುವುದಾಗಿ ತಿಳಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು ಕ್ರಮದ ಭರವಸೆ ನೀಡಿದ್ದಾರೆ ಎಂದರು.
ಕಳೆದ ೧೭ವರ್ಷಗಳಿಂದ ತಾವು ಬಬಲೇಶ್ವರ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿದ್ದು ಈ ಬಾರಿ ಮತದಾರರ ಆಶೀರ್ವಾದ ನನ್ನ ಮೇಲಿದೆ. ಮೂರು ಬಾರಿ ನಿರಂತರ ಸೋಲುಂಡರೂ ಕಾರ್ಯಕರ್ತರು ಇನ್ನೂ ನನ್ನ ಕೈಬಿಟ್ಟಿಲ್ಲ. ನನ್ನ ಪ್ರತಿಸ್ಪರ್ಧಿಗಳು ಅದೇನೇ ತಿಪ್ಪರಲಾಗ ಹಾಕಿದರೂ ಬಬಲೇಶ್ವರ ಕ್ಷೇತ್ರದಲ್ಲಿ ಕಮಲ ಅರಳುವುದು ನಿಶ್ಚಿತ ಎಂದ ಅವರು, ತಾವು ಈ ಬಾರಿ ಸುಮಾರು ೬೦ ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಉಮೇಶ ಕೋಳಕೂರ ಮಾತನಾಡಿ, ನಾನೂ ಈ ಬಾರಿ ಬಬಲೇಶ್ವರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ರೂ ವರಿಷ್ಠರ ನಿರ್ಣಯವನ್ನು ಗೌರವಿಸಿ ವಿಜುಗೌಡರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರಲ್ಲದೇ ಬಿಜೆಪಿ ಗೆಲುವು ಖಚಿತ ಎಂಬ ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಜೋಗೂರ ಹಾಗೂ ಮಂಡಲ ಅಧ್ಯಕ್ಷ ವಿಠ್ಠಲ ಕೆರಸೂರ ಇದ್ದರು.
ಶಾಸಕ ಯತ್ನಾಳ ನನಗೆ ಅಣ್ಣನ ಸಮಾನ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜುಗೌಡ, ಯತ್ನಾಳ ನಮ್ಮ ನಾಯಕರು. ನನಗೆ ಅಣ್ಣನ ಸಮಾನ. ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಲು ನಾನು ಅವರನ್ನು ಕಂಡು ಆಹ್ವಾನಿಸುತ್ತೇನೆ. ಅವರ ಆಶೀರ್ವಾದ ನಮ್ಮ ಮೇಲಿದೆ. ಪಕ್ಷ ಹೇಳಿದರೆ ನಾನು ನನ್ನ ಸಹೋದರ ಸ್ಪರ್ಧಿಸಿದ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಹಾಗೂ ವಿಜಯಪುರ ನಗರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ ಎಂದು ಉತ್ತರಿಸಿದರು.