ಬಿ.ಎಲ್.ಸಂತೋಷ ಕರೆ | ಬಿಜೆಪಿ ಟಿಕೆಟ್ ಧಿಕ್ಕರಿಸಿ ಕಟಕದೊಂಡರನ್ನು ಗೆಲ್ಲಿಸಲು ಪಣ | ರಾಜು ಆಲಗೂರ ಹೇಳಿಕೆ
ನಾಗಠಾಣ: ನನಗೆ ಸ್ವತಃ ಬಿ.ಎಲ್. ಸಂತೋಷ್ ಕರೆ ಮಾಡಿ ಟಿಕೆಟ್ ಹಾಗೂ ಹಣ ಎರಡನ್ನೂ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಸ್ಫೋಟಕ ಮಾಹಿತಿ ಹೊರ ಹಾಕಿದರು.
ಮಂಗಳವಾರ ರಾತ್ರಿ ನಾಗಠಾಣದಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಧಿಕ್ಕರಿಸಿ ನಾನು ಕಟಕದೊಂಡ ಅವರ ಜತೆಗೆ ನಿಂತಿದ್ದೇನೆ. ಕಾಂಗ್ರೆಸ್ ಬಿಡಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ತತ್ವ-ಸಿದ್ಧಾಂತ ಬಿಟ್ಟು ಕಾರ್ಯಕರ್ತರನ್ನು ಅನಾಥರಾಗಿ ಮಾಡಲು ನಾನು ಹೋಗಲಿಲ್ಲ ಎಂದು ಆಲಗೂರ್ ಸ್ಪಷ್ಟಪಡಿಸಿದರು.
ಎಂ.ಬಿ. ಪಾಟೀಲರು ಕೂಡಿಸಿಕೊಂಡು ಕಟಕದೊಂಡ ಅವರ ಜತೆ ಇರಿ ಎಂದು ಹೇಳಿದರು. ನಾನು ಪ್ರಾಮಾಣಿಕವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಕೆಲಸ ಮಾಡುತ್ತೇನೆ. ಯಾವುದೇ ಸಂಶಯ ಬೇಡ. ಈ ಸರಕಾರದಲ್ಲಿ ಕಾರಜೋಳರಿಂದ ನಾಗಠಾಣ ಕ್ಷೇತ್ರದ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿಗಳಾಗಿದ್ದವು. ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿಪರೀತ ಕಾಟ ನೀಡಿದ್ದಾರೆ. ಸದ್ಯದ ಜೆಡಿಎಸ್ ಶಾಸಕರೂ ಯಾವುದೇ ಕೆಲಸ ಮಾಡಿಲ್ಲ. ಅವರಿಗೆಲ್ಲ ಪಾಠ ಕಲಿಸಬೇಕು. ಈ ಚುನಾವಣೆಯಲ್ಲಿ ಕಟಕದೊಂಡ ಅವರನ್ನು ಗೆಲ್ಲಿಸಲೇಬೇಕು. ನಿಶ್ಚಿತವಾಗಿ ಕಾಂಗ್ರೆಸ್ ಸರಕಾರ ಬರುತ್ತದೆ. ಅಭಿವೃದ್ಧಿ ಪರ್ವ ಆರಂಭವಾಗುತ್ತದೆ ಎಂದು ಹೇಳಿದರು.
ಮುಖಂಡ ಚಂದ್ರಶೇಖರ ಅರಕೇರಿ ಮಾತನಾಡಿ, ಕಳೆದ ಬಾರಿ ನಾವೆಲ್ಲ ಜೆಡಿಎಸ್‌ಗೆ ಬೆಂಬಲ ನೀಡಿ ದೊಡ್ಡ ತಪ್ಪು ಮಾಡಿದ್ದೇವೆ. ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿ ಆ ಪಶ್ಚಾತ್ತಾಪದಿಂದ ಹೊರಗೆ ಬರೋಣ. ಎಲ್ಲ ಎಡರು-ತೊಡರು ದಾಟೋಣ. ಸಚಿವ ಕಾರಜೋಳರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಎಷ್ಟೊಂದು ಹೆಣಗಿದರು ಎಂದು ಹೇಳಿದರು.
ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಮಾತು ತಪ್ಪದೇ ನೀವು ಇಟ್ಟಿರುವ ಭರವಸೆಗೆ ಚ್ಯುತಿ ಬರದಂತೆ ಕ್ಷೇತ್ರವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿಗೊಳಿಸುವೆ ಎಂದರು.
ವೈಯಕ್ತಿಕ ಜೀವನದಲ್ಲಿ ತುಂಬ ನೋವು ಅನುಭವಿಸಿರುವ ಕಟಕದೊಂಡರು ತಮ್ಮ ಎರಡು ಗಂಡು ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದು ಅವರ ಜೀವನದ ಕೊನೆಯ ಚುನಾವಣೆ, ಕ್ಷೇತ್ರದ ಜನರನ್ನೇ ಮಕ್ಕಳೆಂದು ತಿಳಿದು ಅವರು ಇರಲಿದ್ದಾರೆ. ಕಟಕದೊಂಡ ಪ್ರಾಮಾಣಿಕ, ನಿಸ್ಪೃಹ ವ್ಯಕ್ತಿ ಎಂದು ಮುಖಂಡ ಎಂ.ಆರ್. ಪಾಟೀಲ ಹೇಳಿದರು.
ಸಾಮಾಜಿಕ ಜಾಲತಾಣದ ಮುಖ್ಯಸ್ಥ ಪ್ರಕಾಶ ಪಾಟೀಲ ಮಾತನಾಡಿ, ರಾಜ್ಯಕ್ಕೆ ಮತ್ತು ನಾಗಠಾಣ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಿದೆ. ಈಗ ಬರುತ್ತಿರುವ ಎಲ್ಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ೧೩೫ರಷ್ಟು ಸ್ಥಾನ ಬರಲಿವೆ ಎಂದು ಹೇಳಿವೆ.
ಸದ್ಯ ಕಾಂಗ್ರೆಸ್ ಅಲೆ ಇದೆ. ಹಾಗಾಗಿ ನಾವೆಲ್ಲ ದುಡುಕದೆ, ನಿರ್ಲಕ್ಷ್ಯ ಮಾಡದೇ ಶಕ್ತಿ ತುಂಬಿದರೆ ಕ್ಷೇತ್ರದಲ್ಲೂ ಜಯ ದೊರೆತು, ರಾಜ್ಯದಲ್ಲೂ ನಾವು ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಬರೀ ಜಾತಿ-ಧರ್ಮ ಎಂದು ಓಟು ಕೇಳುತ್ತದೆ ಎಂದು ಮುಖಂಡ ಎಂ. ಜಿ. ಯಂಕಂಚಿ ಹೇಳಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸುರೇಶ ಗೊಣಸಗಿ, ಪಾಲಿಕೆ ಸದಸ್ಯ ಮನಗೂಳಿ, ಬ್ಲಾಕ್ ಅಧ್ಯಕ್ಷ ಶಹಜಾನ್ ಮುಲ್ಲಾ, ಪವಾರ್ ವಕೀಲರು, ರವಿದಾಸ ಜಾಧವ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ನಾಗಠಾಣ ಜಿಪಂ ಮುಖಂಡ ಚಂದ್ರಶೇಖರ ಅರಕೇರಿಯವರು ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ್ ಮತ್ತು ಅಭ್ಯರ್ಥಿ ವಿಠ್ಠಲ ಕಟಕದೊಂಡ ಬರಮಾಡಿಕೊಂಡರು.