ವಿಜಯಪುರ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್. ಫಣೀಂದ್ರ ಅವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಕಂಪದ ಆಧಾರದ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ವಿರುಪಾಕ್ಷಪ್ಪ ಮೋಟಗೇರಿ ಇವರು ಸಲ್ಲಿಸಿದ ದೂರಿನ ವಿಚಾರಣೆ ಕೈಗೆತ್ತಿಕೊಂಡು, ಅಧಿಕಾರಿಗಳಿಂದ ವಿವರ ಪಡೆದುಕೊಂಡರು. ನೇಮಕಾತಿ ವಿಷಯಗಳು ಲೋಕಾಯುಕ್ತ ಕಾಯ್ದೆಯಡಿ ಬರುವುದಿಲ್ಲ, ತಾವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ, ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸುವ ಹಕ್ಕನ್ನು ಕಾಯ್ದಿರಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.
ನಿವೃತ್ತಿ ವೇತನ ಹಾಗೂ ನಿವೃತ್ತಿ ನಂತರದ ಸೌಲಭ್ಯಗಳನ್ನು ಒದಗಿಸಲು ಕೋರಿ ರಾಜೇಶ್ವರಿ ಇವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ, ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕೆಎಟಿ ಮುಂದೆ ಅರ್ಜಿ ಸಲ್ಲಿಸಿದ್ದು, ಅಲ್ಲಿ ಸಾಕಷ್ಟು ಆದೇಶಗಳನ್ನು ಸಹ ಹೊರಡಿಸಲಾಗಿದೆ. ಸದರಿ ಕೆಎಟಿ ಮುಂದೆ ಇರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಸವಲತ್ತುಗಳನ್ನು ತಮಗೆ ದೊರಕಿಸಿಕೊಡಲಾಗಿದೆ. ಸದರಿ ಅರ್ಜಿಯನ್ನು ಕಾನೂನಿನ ಪ್ರಕಾರ ಪರಿಗಣಿಸಿ ಆದೇಶ ಹೊರಡಿಸಲಾಗುವುದೆಂದು ಎದುರುದಾರರು ಒಪ್ಪಿಕೊಂಡಿದ್ದು, ಈ ಕಾರಣಗಳಿಂದ ಲೋಕಾಯುಕ್ತದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳು ದೂರುದಾರರಿಗೆ ಸಲ್ಲಿಸಿರುವುದರಿಂದ ಕೆಎಟಿ ಮುಂದಿರುವ ಅರ್ಜಿಗಳನ್ನು ಮುಂದುವರಿಸಿಕೊಂಡು ಹೋಗುವ ಹಕ್ಕನ್ನು ದೂರುದಾರರಿಗೆ ಕಾಯ್ದಿರಿಸಿ ಮತ್ತು ಸದರಿ ಅರ್ಜಿ ತೀರ್ಮಾನಗೊಂಡ ನಂತರ ಮತ್ತ ಯಾವುದಾದರೂ ಸಮಸ್ಯೆಯಿದ್ದಲ್ಲಿ ಮತ್ತೊಮ್ಮೆ ಲೋಕಾಯುಕ್ತರಿಗೆ ಸಂಪರ್ಕಿಸುವಂತೆ ತಿಳಿಸಲಾಯಿತು.
ತೋಟದಲ್ಲಿನ ಟ್ರಾನ್ಸ್ಫಾರ್ಮರ್ ಸುಟ್ಟಿದೆ ಎಂದು ೨೦೧೪-೧೫ರಲ್ಲಿಯೇ ತೆಗೆದುಕೊಂಡು ಹೋಗಿ ಈವರೆಗೆ ಮರು ಜೋಡಣೆ ಮಾಡಿಲ್ಲವೆಂದು ಹೂವಿನಹಿಪ್ಪರಗಿ ಗ್ರಾಮದ ಶಂಕ್ರಪ್ಪ ಲಗಳಿ ಅವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ, ಮತ್ತೊಮ್ಮೆ ಟ್ರಾನ್ಸ್ಫಾರ್ಮರ್ ಜೋಡಿಸಲು ವಯಾಬಿಲಿಟಿ ಇಲ್ಲದ ಕಾರಣ ಜೋಡಿಸಿಲ್ಲ ಎಂದು ಎದುರುದಾರರು ಒಪ್ಪಿಕೊಂಡಿದ್ದಾರೆ ಆದರೆ ದೂರುದಾರರಿಗೆ ಬೇರೆ ಟ್ರಾನ್ಸಫಾರ್ಮರ್ ಮೂಲಕ ಸಾಕಷ್ಟು ವಿದ್ಯುತ್ ಒದಗಿಸಲಾಗಿತ್ತಾದರೂ ದೂರು ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಲ್ಲೇಶ ಅವರಿಗೆ ನಿರ್ದೇಶನ ನೀಡಿ, ಅಭಿಯಂತರರೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಯಿತು.
ನಿಡಗುಂದಿ ಸರ್ಕಾರಿ ಶಾಲೆಯಲ್ಲಿ ಒಂದೇ ಹುದ್ದೆಯಲ್ಲಿ ಇಬ್ಬರೂ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಸರ್ಕಾರಕ್ಕೆ ನಷ್ಟವನ್ನುಂಟು ಮಾಡುತ್ತಿರುವ ಕುರಿತು ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಎರಡೂ ವ್ಯಕ್ತಿಗಳನ್ನು ಒಂದೇ ಹುದ್ದೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಹೇಗೆ ಸಾಧ್ಯ. ಇದು ಕಾನೂನು ಬಾಹಿರ. ಇಬ್ಬರು ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರೆ ಇಬ್ಬರಿಗೂ ಹೇಗೆ ಸಂಬಳ ನೀಡುತ್ತೀದಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದ ಅವರು, ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ಅರಿವು ಹೊಂದುವುದು ನಿಮ್ಮ ಜವಾಬ್ದಾರಿಯಾಗಿದೆ. ಕೂಡಲೇ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಹಲಗಣಿ ಪಂಚಾಯತ್‌ನ ಕೂಲಿಕಾರರಿಗೆ ಹಣ ಪಾವತಿಯಾಗದೇ ಇರುವ ಕುರಿತು ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಅವರು, ಹಣ ಪಾವತಿ ಮಾಡಲು ಓಂಬುಡ್ಸಮನ್ ಆದೇಶವಾಗಿದೆ. ಈ ಆದೇಶನಾನುಸಾರ ೧೫ ದಿನಗಳೊಳಗೆ ಹಣ ಪಾವತಿಗೆ ಕ್ರಮ ಕೈಗೊಳ್ಳಿ ಅಥವಾ ಹಣ ಪಾವತಿ ಮಾಡಲು ತಾಂತ್ರಿಕವಾಗಿ ಸಮಸ್ಯೆಗಳಿದ್ದಲ್ಲಿ, ಸಾಧ್ಯವಾಗದಿದ್ದಲ್ಲಿ ಆದೇಶಕ್ಕೆ ಚಾಲೇಂಜ್ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ವಿಚಾರಣೆ ಕಾರ್ಯಕ್ರಮದಲ್ಲಿ ನಿವೇಶನ ಹಂಚಿಕೆ, ರಸ್ತೆ ವಿಚಾರ, ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆ ನಡೆಸಿ, ಹಲವು ಪ್ರಕರಣಗಳಿಗೆ ಸ್ಥಳದಲ್ಲಿಯೇ ನಿರ್ಣಯಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿ಼ಷಿ ಆನಂದ, ಲೋಕಾಯುಕ್ತ ವಿಚಾರಣೆ ಶಾಖೆ ಉಪನಿಬಂಧಕ ಪ್ರಕಾಶ ಎಲ್. ನಾಡಗೇರ, ಲೋಕಾಯುಕ್ತ ಎಸ್.ಪಿ. ಟಿ.ಮಲ್ಲೇಶ, ಲೋಕಾಯುಕ್ತ ಇನ್ಸಪೆಕ್ಟರ್ ಆನಂದ ಟಕ್ಕಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳು, ಅರ್ಜಿದಾರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಪಣೀಂದ್ರ ಅವರಿಂದ ಪ್ರಕರಣಗಳ ವಿಚಾರಣೆ
Related Posts
Add A Comment

