ಧಾರಾಕಾರ ಮಳೆಗೆ ತುಂಬಿ ಹರಿದ ಹಳ್ಳಕೊಳ್ಳ | ರಸ್ತೆ ಸಂಚಾರ ಬಂದ್
ತಿಕೋಟಾ: ತಾಲ್ಲೂಕಿನ ಜಾಲಗೇರಿ, ಟಕ್ಕಳಕಿ, ಲೋಹಗಾಂವ, ಹುಬನೂರ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ ಸೇರಿದಂತೆ ವಿವಿಧೆಡೆ ಬುಧವಾರ ರಾತ್ರಿ ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಗೆ ಹಳ್ಳಕೊಳ್ಳಗಳು ಭರಪೂರ ತುಂಬಿ ಹರಿಯುತ್ತಿವೆ.
ವಿವಿಧ ಗ್ರಾಮಗಳ ನಡುವಿನ ಸೇತುವೆಗಳು ಮೇಲ್ಮಟ್ಟದಿಂದ ತುಂಬಿ ಹರಿಯುತ್ತಿದ್ದು, ಹಲವೆಡೆ ವಾಹನ ಸಂಚಾರ ಬಂದ್ ಆಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಬಿರುಗಾಳಿಗೆ ದ್ರಾಕ್ಷಿ ಪಡದ ಸಾಲುಗಳು ನೆಲಕ್ಕುರುಳಿ ರೈತನಿಗೆ ಸಂಕಷ್ಟ ತರಿಸಿದೆ.
ಟಕ್ಕಳಕಿ ಹಾಗೂ ಡೋಕಳೆವಾಡಿ ಮದ್ಯೆ ಇರುವ ಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದ್ದು ದಿನವಿಡಿ ಯಾವುದೇ ವಾಹನ ಸಂಚಾರ ಆಗದೇ ರಸ್ತೆ ಸಂಫೂರ್ಣ ಬಂದ್ ಆಗಿ ಸಾಲುಗಟ್ಟಲೇ ವಾಹನಗಳು ಎರಡು ಬದಿಗೆ ನಿಂತುಕೊಂಡ ದೃಶ್ಯ ಕಾಣುತ್ತಿತ್ತು. ಹುಬನೂರ ಹಳ್ಳ ಸಹ ಸೇತುವೆ ಮೇಲಿಂದ ನೀರು ಹರಿಯುತ್ತಿತ್ತು. ರೈತರ ಜಮೀನಿನ ಒಡ್ಡುಗಳಲ್ಲಿ ನೀರು ತುಂಬಿದ್ದವು, ಕೆಲವೆಡೆ ಒಡ್ಡು ಒಡೆದು ಹೋಗಿವೆ.
ವಾಲಿದ ದ್ರಾಕ್ಷಿ ಪಡ: ಲೋಹಗಾಂವ ತಾಂಡಾ ನಿವಾಸಿ ರಾಜು ಹುನ್ನೂರ ಅವರ ಜಮೀನಿನಲ್ಲಿದ್ದ 2700 ದ್ರಾಕ್ಷಿ ಗಿಡಗಳಲ್ಲಿ ಐದು ದ್ರಾಕ್ಷಿ ಗಿಡಗಳ ಸಾಲು (ಐದು ನೂರು ಗಿಡ) ನೆಲಕ್ಕಿರುಳಿವೆ. ಸಾಲುಗಳಲ್ಲಿದ್ದ ಕಲ್ಲಿನ ಕಂಬಗಳು ಮುರಿದಿದ್ದು, ಬಿದಿರು ಕಿತ್ತು ಹೋಗಿವೆ. ಮೊದಲ ವರ್ಷದ ಆದಾಯದ ನಿರೀಕ್ಷೆಯಲ್ಲಿದ್ದ ರೈತ ರಾಜು ಸಾಲ ಮಾಡಿ ದ್ರಾಕ್ಷಿ ಬೆಳೆ ನಾಟಿ ಮಾಡಿದ್ದರು. ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ದ್ರಾಕ್ಷಿ ಪಡದ ಸಾಲುಗಳನ್ನು ಪುನಃ ನಿಲ್ಲಿಸಲು ₹ 25 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ ಎಂದು ತಿಳಿಸಿದನು.
“ಪ್ರತಿದಿನ ಡೋಕಳೆವಾಡಿ ಮಾರ್ಗವಾಗಿ ಶಾಲೆಗೆ ಹೋಗುತ್ತಿದ್ದೆವು, ಇಂದು ಸೇತುವೆ ಮೇಲೆ ಸಂಚಾರ ಬಂದ್ ಆಗಿದ್ದರಿಂದ ಲೋಹಗಾಂವ ಮಾರ್ಗವಾಗಿ ಶಾಲೆಗೆ ತುಲುಪಿದೆವು.”
– ರಾಜೇಶ ಪಾಟೀಲ ಹಾಗೂ ಮಹಾಂತೇಶ ರಾಠೋಡ
ಶಿಕ್ಷಕರು, ರಾವಜಿವಸ್ತಿ ಟಕ್ಕಳಕಿ

