ಸಾರ್ವಜನಿಕ ಅಹವಾಲು ಸ್ವೀಕಾರ & ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಸೂಚನೆ
ವಿಜಯಪುರ: ಸಾರ್ವಜನಿಕ ಸಮಸ್ಯೆಗಳನ್ನು ಪರಿಹಾರ ಮಾಡುವುದು ಸರಕಾರಿ ನೌಕರರ ಆದ್ಯತೆಯಾಗಬೇಕು. ಸಮಸ್ಯೆಗಳು ಉದ್ಭವವಾಗದಂತೆ ತಮಗೆ ವಹಿಸಿದ ಕಾರ್ಯದ ವ್ಯಾಪ್ತಿ, ಜವಾಬ್ದಾರಿ ಅರಿತುಕೊಂಡು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ತಾಳ್ಮೆ ಹಾಗೂ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟ ಹೆಚ್ಚಿಸಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್. ಫಣೀಂದ್ರ ಹೇಳಿದರು.
ಗುರುವಾರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಆಮಿಷಕ್ಕೆ ಒಳಗಾಗದೇ ಸಂದರ್ಭಾನುಸಾರ ಕಾನೂನು ನಿಯಮಾವಳಿಗಳ ಪ್ರಕಾರ ಭ್ರಷ್ಟಾಚಾರರಹಿತ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ನೌಕರರ ಕರ್ತವ್ಯವಾಗಿದ್ದು, ಅರ್ಹ ಫಲಾನುಭವಿಗಳಿಗೆ ದೊರೆಯಬೇಕಾದ ಸೇವೆಯಲ್ಲಿ ಯಾವುದೇ ವಿಳಂಬವಾಗದಂತೆ ಕಾರ್ಯ ನಿರ್ವಹಿಸಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.
ಸಾರ್ವಜನಿಕರ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಂಡು ಜನರಿಗೆ ಸರಕಾರಿ ಸೌಲಭ್ಯ ಸವಲತ್ತುಗಳು ಒದಗಿಸಲು ಯಾವುದೇ ವಿಳಂಬವಾಗದಂತೆ ನಿಗದಿತ ಸಮಯದಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಸಾರ್ವಜನಿಕರಿಗೆ ದೊರಕಬೇಕಾದ ಮೂಲಭೂತ ಹಕ್ಕುಗಳನ್ನು ಒದಗಿಸಲು ಆಸ್ಪತ್ರೆಗಳ ನಿರ್ಮಾಣ, ರಸ್ತೆ, ಶಿಕ್ಷಣ ಹೀಗೆ ಹಲವಾರು ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಶ್ರಮಿಸುತ್ತಿದೆ. ಈ ಯೋಜನೆಗಳ ಸಮಯೋಚಿತ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧರಾಗಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಲೋಕಾಯಕ್ತಕ್ಕೆ ಒಳಪಡದ ಪ್ರಕರಣಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅರ್ಹರಿಗೆ ಉಚಿತವಾಗಿ ಕಾನೂನು ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುವುದು. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ ಸೋನಾವಣೆ, ವಿಚಾರಣೆ ಶಾಖೆಯ ಉಪ ನಿಬಂಧಕರಾದ ಪ್ರಕಾಶ ಎಲ್.ನಾಡಿಗೇರ,ಲೋಕಾಯುಕ್ತದ ಕಾನೂನು ಅಭಿಪ್ರಾಯದ ಸಹಾಯಕ ನಿಬಂಧಕರಾದ ಶುಭವೀರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್.ಹಾಗರಗಿ ಉಪ ಲೋಕಾಯುಕ್ತ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ, ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ್,ಲೋಕಾಯುಕ್ತ ಡಿವೈಎಸ್‌ಪಿ ಸುರೇಶ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ರಾಜಶೇಖರ ದೈವಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಲೋಕಾಯುಕ್ತ ಸಂಸ್ಥೆಯಿಂದ ಉತ್ತಮ ಸೇವೆ
ಕಾರ್ಯಾಂಗದ ಸುಧಾರಣೆಗೆ ಸರಿಯಾದ ಮಾರ್ಗದರ್ಶನ ನೀಡುತ್ತ ಉತ್ತಮ ಆಡಳಿತ ಹಾಗೂ ಸೇವೆ ಒದಗಿಸಲು ಲೋಕಾಯುಕ್ತ ಸಂಸ್ಥೆಯು ಶ್ರಮಿಸುತ್ತಿದೆ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಲೋಕಾಯುಕ್ತಕ್ಕೆ ಅಹವಾಲುಗಳನ್ನು ದಾಖಲೆ ಸಹಿತ ದೂರು ನೀಡುವಂತೆಯೂ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಕರ್ನಾಟಕ ಉಪ ಲೋಕಾಯುಕ್ತರು ಹೇಳಿದರು.

