ವಿಜಯಪುರ: ಬಸವಾದಿ ಶರಣರು ಭೌತಿಕ, ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿ ಸವಿದು ಅನುಭವಿಸಿ ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು ಅಂತಹ ವಚನಕಾರರಲ್ಲಿ ವೈದ್ಯ ಸಂಗಣ್ಣ ಒಬ್ಬರು. ಅವರ ವಚನಗಳಲ್ಲಿ ಭಕ್ತಿನಿಷ್ಠೆ, ಜ್ಞಾನನಿಷ್ಠೆ, ವಿಶ್ವಾಸನಿಷ್ಠೆ, ಕಾಯಕ, ದಾಸೋಹ ಜೊತೆಗೆ ಶರಣರ ನಾಡಿಮಿಡಿತವನ್ನು ಕಂಡು ಹಿಡಿದು ಚಿಕಿತ್ಸೆ ನೀಡುತ್ತ ನೈಸರ್ಗಿಕವಾಗಿ ಬೆಳೆದ ತಪ್ಪಲು ತಂದು ಅದರ ರಸದಿಂದ ಔಷಧ ತಯಾರಿಸಿ ಚಿಕಿತ್ಸೆ ನೀಡುತ್ತಿದ್ದರು. ಕಾಯಕದ ಜೊತೆಗೆ ಪಂಚಾಕ್ಷರಿ ಮಂತ್ರ ಪಠಿಸುವುದರಿಂದ ರೋಗ ಹೋಗಲಾಡಿಸಬಹುದು ಎಂದು ಶರಣರಿಗೆ ಹೇಳುತ್ತ ವಿಶ್ವಾಸ, ಆತ್ಮಸ್ಥೈರ್ಯ ತುಂಬುತ್ತಿದ್ದರು. ಅವರು ರಚಿಸಿದ ವಚನಗಳು ಕೇವಲ ೨೪ ಮಾತ್ರ ಲಭ್ಯವಾಗಿವೆ. ಶರಣರಿಗೆ ಜೀವನಾಮೃತ ನೀಡಿದವರು ಅವರು ಎಂದು ಸಾಹಿತಿ ಮೋಹನ ಕಟ್ಟಿಮನಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಚನಕಾರ ವೈದ್ಯ ಸಂಗಣ್ಣ ಅನುಭಾವ ಕುರಿತು ಮಾತನಾಡಿದರು.
ಶಿವಶರಣ ವೈದ್ಯ ಸಂಗಣ್ಣ ಅವರ ಕುರಿತು ಶಾರದಾ ಕೊಪ್ಪ (ಐಹೊಳ್ಳಿ) ಮಾತನಾಡುತ್ತ ಶರಣ ಪರಂಪರೆಯಲ್ಲಿಯೇ ಸಾರ್ಥಕ ಬದುಕನ್ನು ಬಾಳು ಬೆಳಗಿದವರು. ನಮ್ಮ ನಡೆ, ನುಡಿ, ಆಚಾರ, ವಿಚಾರ, ಸತ್ಯಶುದ್ಧ ಕಾಯಕ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮಾನಸಿಕವಾಗಿ ಸದೃಢವಾಗಬೇಕು. ಆತ್ಮಶುದ್ಧಿ ಮುಖ್ಯ ಮೈ ಮನಕ್ಕೆ ಒಂದಾಗುವ ಔಷಧವನ್ನು ವಿಶ್ವಾಸ, ನಂಬಿಕೆ, ಇದ್ದವರಿಗೆ ಮಾತ್ರ ನೀಡುತ್ತಿದ್ದರು. ಶರಣತತ್ವ ಸಿದ್ಧಾಂತ ನಾವೆಲ್ಲ ಅನುಸರಿಸಿ ಬಾಳಬೇಕು ಎಂದರು.
ಆರ್.ಎಂ. ತೋಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆಯಾದ ಸಿದ್ರಾಮಪ್ಪ ಉಪ್ಪಿನ ಹಾಗೂ ಜಿಲ್ಲಾ ರೋಟರಿ ಪ್ರೋಬಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಶಾರದಾ ಕೊಪ್ಪ ಅವರನ್ನು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ತಾಲೂಕಾ ಅಧ್ಯಕ್ಷ ಬಸವರಾಜ ಇಟ್ಟಂಗಿ, ಡಾ. ವ್ಹಿ.ಡಿ.ಐಹೊಳ್ಳಿ, ಎಸ್.ಎಸ್. ನಾಡಗೌಡರ, ಅಕ್ಕಮಹಾದೇವಿ ಬುರ್ಲಿ, ರವೀಂದ್ರ ಬ್ಯಾಕೋಡ, ಬಸವರಾಜ ಒಂಟಗೂಡಿ, ಭಾರತಿ ಭೂಯ್ಯಾರ, ಮಹಾದೇವ ಹಾಲಳ್ಳಿ, ವಿಠ್ಠಲ ತೇಲಿ, ಎಂ.ಜಿ. ಯಾದವಾಡ ಉಪಸ್ಥಿತರಿದ್ದರು.
ಸಾಹಿತಿ ಸಂಗಮೇಶ ಬದಾಮಿ ನಿರ್ವಹಿಸಿದರು. ಅಮರೇಶ ಸಾಲಕ್ಕಿ ವಂದಿಸಿದರು.
ನಂತರ ಓಂಶಾಂತಿ ಅಕ್ಕನ ಬಳಗದವರಿಂದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶರಣ-ಶರಣೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

