ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ |ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹ
ವಿಜಯಪುರ: ಆಲಮಟ್ಟಿ ಜಲಾಶಯ ಎತ್ತರದಿಂದ ಬಾಧಿತವಾಗುವ ಪ್ರದೇಶದಲ್ಲಿ ಪುನರ್‌ವಸತಿ, ಪುನರ್‌ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧವಿದ್ದು, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಬುಧವಾರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ೨ನೇ ತೀರ್ಪು ಬಂದಿದ್ದು, ತೀರ್ಪಿನನ್ವಯ ಆಲಮಟ್ಟಿ ಎತ್ತರ ಹೆಚ್ಚಳದಿಂದಾಗಿ ೧೩೦ ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದೆ. ೧೩೦ ಟಿಎಂಸಿ ನೀರನ್ನು ಬಳಕೆ ಮಾಡಲು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಾತ್ರ ಆಲಮಟ್ಟಿ ಎತ್ತರ ಹೆಚ್ಚಿಸಲು ಸಾಧ್ಯವಾಗುತ್ತದೆ. ೫೧೯.೬ ರಿಂದ ೫೨೪.೨೫೬ ಮೀ. ಎತ್ತರಿಸಿದಾಗ ಮಾತ್ರ ೧೩೦ ಟಿಎಂಸಿ ನೀರು ದೊರೆಯಲಿದೆ. ಆಲಮಟ್ಟಿ ಎತ್ತರ ಹೆಚ್ಚಳದಿಂದ ೧೪.೬೮ ಲಕ್ಷ ಎಕರೆ ಜಮೀನು ನೀರಾವರಿಗೊಳಪಟ್ಟು ರೈತರಿಗೆ ಅನುಕೂಲವಾಗಲಿರುವುದರಿಂದ ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಪುನರ್‌ವಸತಿ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಿದ್ಧವಿದ್ದು, ಈ ಹಿಂದೆ ೫೨ ಸಾವಿರ ಕೋಟಿ ರೂ. ಪುನರ್‌ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಲೆಕ್ಕಾಚಾರ ಮಾಡಲಾಗಿತ್ತು, ಪ್ರಸ್ತುತ ೮೨ ಸಾವಿರ ಕ್ಕೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಾವರಿಗಾಗಿ ೫ ವರ್ಷದಲ್ಲಿ ೧ ಲಕ್ಷ ಕೋಟಿ ರೂ. ಖರ್ಚು ಮಾಡುವ ಉದ್ದೇಶ ಹೊಂದಿರುವುದರಿಂದ ಅಧಿಸೂಚನೆ ಹೊರಡಿಸುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗುವುದು. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಆಲಮಟ್ಟಿ ಡ್ಯಾಂ ಸಂಪೂರ್ಣವಾಗಿ ತುಂಬಿದೆ. ನೀರಿನ ಮಟ್ಟ ೫೧೯.೬ ಮೀ. ತಲುಪಿದೆ. ರಾಜ್ಯದಾದ್ಯಂತ ಇರುವ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಕಬಿನಿ, ಕಾವೇರಿ ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ, ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಭದ್ರಾ ಜಲಾಶಯ ಅಷ್ಟೇ ಅಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ, ಸೂಪಾ, ವಾಣಿ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅಂತರ್‌ಜಲ ಮಟ್ಟ ಹೆಚ್ಚಾಗಿ, ಬೊರವೆಲ್ ನೀರು ಸುಲಭವಾಗಿ ದೊರೆಯಲಿದೆ. ಉತ್ತಮ ಬೆಳೆಯ ಇಳುವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
೧೩೦ ಟಿಎಂಸಿ ಸಾಮಥ್ಯ ಹೊಂದಿರುವ ತುಂಗಭದ್ರಾ ಡ್ಯಾಂ ನ ೧೯ನೇ ಗೇಟ್ ಕಳಚಿ ಹೋಗಿದ್ದರಿಂದ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಬೆಳೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಮೂರು ರಾಜ್ಯಗಳ ರೈತರಿಗೆ ಅನುಕೂಲವಾಗುವ ಯೋಜನೆ ಇದಾಗಿದ್ದು, ಇನ್ನೂ ೨೦ ಟಿಎಂಸಿ ನೀರು ಬಂದರೆ, ಶೇ.೯೫ ಶೇಖರಣೆಯಾಗುತ್ತದೆ. ರೈತರಿಗೂ ಕೂಡ ನೀರು ಸಿಗುವುದಿಲ್ಲ ಎಂಬ ಆತಂಕವಿತ್ತು. ಆದರೆ ಕಳಚಿಹೋದ ಗೇಟ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಕ್ರಮ ವಹಿಸಲಾಗಿದ್ದು, ಆದಷ್ಟು ಶೀಘ್ರ ಭರ್ತಿಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ ಮಾರ್ಜಕ್ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ,ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಉಭಯ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಕೃಷ್ಣೆಯ ಜಲಧಿಗೆ ಸಿಎಂ ಬಾಗಿನ ಅರ್ಪಣೆ
ವಿಜಯಪುರ: ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸಿದರು.
ಈ ಸಂದರ್ಭ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

