ಆ.೨೮ರಂದು ಕರ್ನಾಟಕ ಸುವರ್ಣ ಸಂಭ್ರಮ-೫೦ ಕಾರ್ಯಕ್ರಮ
ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಹಮ್ಮಿಕೊಂಡ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ೨೦೨೪ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುತ್ತಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ಜರುಗಿಸಲಾಯಿತು.
ಸಂಖ ಗ್ರಾಮದಲ್ಲಿ ಆ.೨೧ರ ಬುಧವಾರದಂದು ಜರುಗಿದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ವಸತಿ ಮತ್ತು ಊಟ, ಕಾರ್ಯಕ್ರಮದ ಜಾಗದ ಪರಿಶೀಲನೆ ಇತ್ಯಾದಿಗಳನ್ನು ನಡೆಸಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಶ್ರೀ ದಾನಮ್ಮ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷರಾದ ವಿಜುಗೌಡ ಎಸ್ ಪಾಟೀಲ, ಟ್ರಸ್ಟ್ನ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಖಚಾಂಚಿ ವಿಠ್ಠಲ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಅಶೋಕ ಚಲವಾದಿ ಸೇರಿದಂತೆ ವಿವಿಧ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
