ಎಸ್.ಬಿ ಕಲಾ & ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ
ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಸತತ ಓದು,ಕ್ರೀಡಾ ಅಲ್ಲದೇ ಪಠ್ಯೇತರ ಸಾಂಸ್ಕೃತಿಕ, ಮಹಾವಿದ್ಯಾಲಯಲ್ಲಿನ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಇಂತಹ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಬಿ.ಎಲ್.ಡಿ.ಇ.ಸಂಸ್ಥೆಯ ಪದವಿ ಕಾಲೇಜು ಆಡಳಿತಾಧಿಕಾರಿ ಡಾ.ವಿಲಾಸ ಬಗಲಿ ಹೇಳಿದರು
ನಗರದ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂ ಎಸಿ ಸಂಯುಕ್ತಾಶ್ರಯದಲ್ಲಿ ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವವದಲ್ಲಿ ಪ್ರತಿಯೊಂದು ಕ್ಷಣವೂ ಮೌಲ್ಯಯುತವಾದದ್ದು ಕಲಿಕಾ ಹಂತದಲ್ಲಿ ಚನ್ನಾಗಿ ಅಧ್ಯಯನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.ವಿದ್ಯಾರ್ಥಿಗಳು ನಿರಂತರ ಓದು,ಕ್ರೀಡಾ ಚಟುವಟಿಕೆ ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಶೈಕ್ಷಣಿಕ ಜೊತೆಗೆ ಸಾಂಸ್ಕೃತಿಕ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳವುದು ಅವಶ್ಯಕ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹು ಮುಖ್ಯ. ಶಿಸ್ತು ಕೇವಲ ಶಾಲಾ ಕಾಲೇಜಿನಲ್ಲಿ ಮಾತ್ರವಲ್ಲದೆ ಮನೆಯಲ್ಲಿ ಇದನ್ನು ರೂಡಿಸಿಕೊಳ್ಳಬೇಕು ಆಗ ಮಾತ್ರ ನೀವು ನಿಮ್ಮ ಗುರಿ ತಲುಪಲು ಸಾಧ್ಯ. ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು.ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ಗಳಿಗೆ ಅಂಟಿಕೊಂಡು ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಹೊರಬಂದು ಬೇರೆ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಾವು ನಮ್ಮ ಸಾಮರ್ಥ್ಯವನ್ನು ತೋರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್. ಎಂ. ಮಿರ್ದೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪರೀಕ್ಷೆ,ಅಂಕಗಳು,ತರಗತಿ ಎಂದು ಹಿಂಬಾಲಿಸದೆ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಬೇಕು. ಮಹಾವಿದ್ಯಾಲಯದಲ್ಲಿ ಇಂತಹ ನಾನಾ ತರಹದ ಚಟುವಟಿಕೆಗಳನ್ನು ಏರ್ಪಡಿಸುವುದು ನಿಮಗಾಗಿಯೇ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಪರಿಶ್ರಮ ಶ್ರದ್ಧೆಯಿಂದ ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವರದಿಯನ್ನು ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ದೊಡ್ಡಮನಿ ವಾಚನ ಮಾಡಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮನೋಜ್ ದೊಡ್ಮನಿ ಫುಟ್ಬಾಲ್ ಹಾಗೂ ಪಾಯಲ್ ಚೌಹಾನ್ ಸೈಕ್ಲಿಂಗ್ ನಲ್ಲಿ ಉನ್ನತ ಸಾಧನೆಗೈದಿರುವುದಕ್ಕೆ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಶ್ರೀನಿವಾಸ್ ದೊಡ್ಡಮನಿ, ದೈಹಿಕ ನಿದೇಶಕ ಎಸ್ ಕೆ ಪಾಟೀಲ, ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ.ತರನ್ನುಮ್ ಜಬಿನ್ ಖಾನ್ ಕಾರ್ಯಕ್ರಮ ನಿರೂಪಿಸಿದರು, ಪ್ರೊ. ಶ್ವೇತಾ ಸವನೂರ್ ವಂದಿಸಿದರು.

