ಸಿಂದಗಿ: ಪಟ್ಟಣದ ಪುರಸಭೆ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಏಕೆಂದರೆ ಅಲ್ಲಿ ಆಡಳಿತ ಮಂಡಳಿಯಿಲ್ಲ. ಅವರು ಮಾಡಿದ್ದೇ ಆಟವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ತಲೆ ಕೆಳಗಾಗಿ ತ್ರಿವರ್ಣ ಧ್ವಜ ಹಾರಿದ ಹಿನ್ನಲೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಹಾಗೂ ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿ ಬಿಜೆಪಿ ಪಕ್ಷದ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಆಡಳಿತ ಮಂಡಳಿ ಇಲ್ಲ ಎಂದು ತಿಳಿದುಕೊಂಡು ಎಲ್ಲೆಲ್ಲಿ ಹಗರಣ ಮಾಡಬೇಕು. ಯರ‍್ಯಾರ ಪ್ಲಾಟ್ ಎತ್ತಿ ಬಡಿಬೇಕು ಎಂಬ ವಿಚಾರದಲ್ಲಿಯೇ ಇದ್ದಾರೆ. ಇದರಿಂದ ಅಧಿಕಾರಿಗಳು ಮಾಡಿದ್ದೇ ಆಟವಾಗಿದೆ. ಇನ್ನೂ ಆಡಳಿತಾಧಿಕಾರಿ ಅಭೀದ ಗದ್ಯಾಳ ಅವರು ಅಮಾವಾಸ್ಯೆ, ಹುಣ್ಣಿಗೊಮ್ಮೆ ಭೇಟಿ ನೀಡಿ ಬಿಲ್‌ಗಳಿಗೆ ಸಹಿ ಮಾಡಿ ಹೋಗುತ್ತಾರೆ. ಪಟ್ಟಣದ ನೈರ್ಮಲ್ಯದ ಕುರಿತು ಪುರಸಭೆಗೆ ಕಾಳಜಿಯೇ ಇಲ್ಲ. ಹಗರಣ ಮಾಡುವುದೇ ಖಯಾಲಿಯಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಹೋದರೆ ಬಿಜೆಪಿ ಕಾರ್ಯಕರ್ತರು ಪುರಸಭೆಗೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಯಬಣ್ಣ ದೇವರಮನಿ ಮಾತನಾಡಿ, ಪುರಸಭೆ ಆಡಳಿತದಲ್ಲಿ ದ್ವೇಷ ರಾಜಕಾರಣ ಸೇರಿದ್ದು. ಬಿಜೆಪಿ ಸರ್ಕಾರದಲ್ಲಿ ೭೫೦ ಮನೆಗಳು ಮಂಜೂರು ಆಗಿತ್ತು. ಆದರೆ ಸರ್ಕಾರ ಬದಲಾದ ನಂತರ ನೂತನ ಶಾಸಕರು ರದ್ದುಗೊಳಿಸಿದ್ದಾರೆ. ಈ ದ್ವೇಷ ರಾಜಕಾರಣದಿಂದ ಬಡವರ ಜೀವನಕ್ಕೆ ಹೊಡೆತ ಬಿದ್ದಿದೆ. ಇನ್ನು ಸಿಂದಗಿ ಪುರಸಭೆ ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಇಂಡಿ ಉಪವಿಭಾಗ ಅಧಿಕಾರಿಗಳ ಹಸ್ತಕ್ಷೇಪವಿದೆ. ಈ ಅಧಿಕಾರಿ ಪುರಸಭೆಯಲ್ಲಿ ಕಾರ್ಯ ನಿರ್ವಹಿಸದೇ ಪ್ರವಾಸಿ ಮಂದಿರದಲ್ಲಿ ಕುಳಿತು ಬಿಲ್‌ಪಾಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್.ಟಿ.ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ ಮಾತನಾಡಿದರು.
ಈ ವೇಳೆ ಮಂಡಲ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ, ರೈತ ಮೋರ್ಚಾ ತಾಲೂಕಾಧ್ಯಕ್ಷ ಪೀರು ಕೆರೂರ, ವಿಠ್ಠಲ ನಾಯ್ಕೋಡಿ, ಅನುಸೂಯಾ ಪರಗೊಂಡ, ಯಲ್ಲು ಇಂಗಳಗಿ, ಖಾಜು ಬಂಕಲಗಿ, ಅಶೋಕ ನಾರಾಯಣಪೂರ, ಅಲೋಕ ರೂಡಗಿ, ನೀಲಮ್ಮ ಯಡ್ರಾಮಿ, ಸಿದ್ರಾಮ ಅನಗೊಂಡ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಬಿಜೆಪಿ ಪ್ರತಿಭಟನೆ
Related Posts
Add A Comment

