ವಿಜಯಪುರ: ನೀರಾವರಿ ಕೆಲಸಗಳನ್ನು ಮೆಚ್ಚಿ ರೈತನೋರ್ವ ಮಕ್ಕಳೊಂದಿಗೆ ಆಗಮಿಸಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರಿಗೆ ಚುನಾವಣೆ ಖರ್ಚಿಗೆ ಹಣ ನೀಡಿ ಅಭಿಮಾನ ವ್ಯಕ್ತಪಡಿಸಿದ ಘಟನೆ ತಿಕೋಟಾ ತಾಲೂಕಿನ ತಾಜಪುರ(ಎಚ್) ಗ್ರಾಮದಲ್ಲಿ ನಡೆಯಿತು.
ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸದ ಬಳಿಕ ಎಂ. ಬಿ. ಪಾಟೀಲ ಅವರು ತಾಜಪುರ(ಎಚ್) ಗ್ರಾಮಕ್ಕೆ ಭೇಟಿ ನೀಡಿದರು. ಈ ಸುದ್ದಿ ತಿಳಿದ ಗ್ರಾಮದ ರೈತ ಕುಬೇರ ಹಾಲಳ್ಳಿ ತನ್ನ ಪುಟ್ಟ ಮಕ್ಕಳಾದ ಕುಶಾಲ ಮತ್ತು ಓಂಕಾರ ಜೊತೆ ಆಗಮಿಸಿ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿದರು. ನಿಮ್ಮಿಂದಾಗಿ ನಮ್ಮ ಹೊಲಕ್ಕೆ ನೀರು ಬಂದಿದೆ. ಆರ್ಥಿಕ ಪರಿಸ್ಥಿರಿ ಸುಧಾರಿಸಿದೆ. ನಿಮ್ಮ ಋಣ ತಿರಿಸಲು ಸಾಧ್ಯವಿಲ್ಲ. ಆದರೆ, ಅಭಿಮಾನದ ಪ್ರತಿಕವಾಗಿ ಇಬ್ಬರೂ ಮಕ್ಕಳಿಂದ ತಲಾ ರೂ.1001 ರಂತೆ ಒಟ್ಟು ರೂ.2002 ಹಣ ಕಾಣಿಕೆ ನೀಡಿದರು.
ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನತೆಗೆ ಯಾವುದೇ ರೀತಿಯಲ್ಲಿ ಒಳಿತಾಗಿಲ್ಲ. ರೂ.3.50 ಕೋ. ಸಾಲ ಮಾಡಿದೆ. ರೈತರ ಆದಾಯಕ್ಕಿಂತ ಖರ್ಚು ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ. ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.
ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಯುವಕರಿಗಾಗಿ ಗ್ರಾಮ ಪಂಚಾಯಿತಿಗಳಲ್ಲಿ ಯುವ ಕೇಂದ್ರ ಸ್ಥಾಪಿಸಿ, ಗ್ರಂಥಾಲಯ, ಇಂಟರನೆಟ್ ಮತ್ತು ಉದ್ಯೋಗಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಎಂ. ಬಿ. ಪಾಟೀಲ ಹೇಳಿದರು.