ದೇವರಹಿಪ್ಪರಗಿ: ಸುಮಾರು ಒಂದು ಗಂಟೆಗಳ ಕಾಲ ಸುರಿದ ಬಿರುಸಾದ ಗುಡುಗು, ಸಿಡಿಲುಭರಿತ ಮಳೆಗೆ ಪಟ್ಟಣದ ವಿವಿಧ ಜಮೀನುಗಳಲ್ಲಿನ ಕಬ್ಬು ಹಾಗೂ ದಾಳಿಂಬೆ ಬೆಳೆಗಳು ಹಾಳಾಗಿದ್ದು ರೈತರಿಗೆ ಹಾನಿಯುಂಟು ಮಾಡಿದೆ.
ಪಟ್ಟಣದಲ್ಲಿ ಸೋಮವಾರ ಸಂಜೆ ೭ ಗಂಟೆಗೆ ಆರಂಭವಾದ ಮಳೆಗೆ ಇಂಗಳಗಿ ಕೆರೆಯ ಹತ್ತಿರದ ನಾನಾಗೌಡ ಬಿರಾದಾರ ಎಂಬುವವರಿಗೆ ಸೇರಿದ ೫೭೫/೨ ಸರ್ವೆ ಸಂಖ್ಯೆಯಲ್ಲಿನ ಎಂಟು ಎಕರೆ ಕಬ್ಬು ನೆಲಕ್ಕೋರಗಿ ಸಂಪೂರ್ಣ ಹಾಳಾಗಿದ್ದರೆ, ರಾಮು ದೇಸಾಯಿ ಎಂಬುವವರಿಗೆ ಸೇರಿದ ದಾಳಿಂಬೆಯ ೮೦೦ ಗಿಡಗಳಲ್ಲಿ ೫೦೦ ಗಿಡಗಳು ಹಾಗೂ ಹಣಮಂತ್ರಾಯ ಕೋಟಿನ್ ಎಂಬುವವರ ೮೦ ನಿಂಬೆ ಗಿಡಗಳಲ್ಲಿ ೨೦ಕ್ಕೂ ಹೆಚ್ಚು ನಿಂಬೆ ಗಿಡಗಳು ಬೇರು ಸಹಿತ ನೆಲಕ್ಕೋರಗಿವೆ. ಇದರಿಂದ ಆಳೆತ್ತರದ ಕಬ್ಬು ಹಾಗೂ ದಾಳಿಂಬೆ, ನಿಂಬೆ ಗಿಡಗಳು ಹಣ್ಣುಗಳ ಸಹಿತ ಹಾಳಾಗಿವೆ.
ತೋಟಗಾರಿಕೆಯ ಇಲಾಖೆಯ ಡಿಡಿ ರಾಹುಲಕುಮಾರ ಭಾವಿದೊಡ್ಡಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಸ್.ಎಸ್.ಪಾಟೀಲ, ಹೋಬಳಿಮಟ್ಟದ ತೋಟಗಾರಿಕಾ ಅಧಿಕಾರಿ ಅಕ್ಷತಾ ಹೊಂಗಲ ಕೃಷಿ ಇಲಾಖೆಯ ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೇಗೋಳ, ಗ್ರಾಮ ಆಡಳಿತಾಧಿಕಾರಿ ಅನೀಲಕುಮಾರ ರಾಠೋಡ ಬೆಳೆಯಿಂದ ಹಾನಿಗೊಳಗಾದ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.
ರೈತಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ, ತಾಲ್ಲೂಕು ಅಧ್ಯಕ್ಷ ರಾಮು ದೇಸಾಯಿ, ರೈತಸಂಘದ ಅಧ್ಯಕ್ಷ ಅಜೀಜ್ ಯಲಗಾರ, ಬಸವರಾಜ ಇಂಡಿ, ವೀರೇಶ ಕುದರಿ, ಮಡು ದಿಂಡವಾರ, ಕಾಸುಗೌಡ ಬಿರಾದಾರ(ಜಿರ್ಲಿ), ಗೌಡು ದಾನಗೊಂಡ, ಬಸನಗೌಡ ಬಿರಾದಾರ (ಭೈರೋಡಗಿ), ರಾಚೋಟಯ್ಯ ಹಿರೇಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

