ಆಲಮಟ್ಟಿ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನೀರು ಮರು ಹಂಚಿಕೆ ಮಾಡುವಂತೆ ಆಗ್ರಹಿಸಿ ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್‌ಎಲ್ ಎಂಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೂಡಲೇ ಎರಡೂ ಡ್ಯಾಂಗಳ ನೀರು ಮರು ಹಂಚಿಕೆ ಮಾಡಿ ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಜಿಲ್ಲೆಯಲ್ಲಿ ೫ ನದಿಗಳು ಹರಿದರೂ ಕುಡಿವ ನೀರಿಗೂ ತೊಂದರೆ ಅನುಭವಿಸುವಂತಾಗಿದೆ. ಕೃಷಿಗೆ ನೀರುಣಿಸುವದು ಕನಸಿನ ಮಾತಾಗಿದೆ. ಅವಳಿ ಜಿಲ್ಲೆಗಳ ರೈತರ ಬದುಕು ಹಸನಾಗಲು ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಮಾಡುವುದು ಅಗತ್ಯವಿದೆ ಎಂದು ಆಗ್ರಹಿಸಿದರು.
ಅವಳಿ ಡ್ಯಾಂಗಳ ನರ‍್ಮಾಣಕ್ಕೆ ಅಖಂಡ ವಿಜಯಪುರ ಜಿಲ್ಲೆಯ ೨೦೧ ಗ್ರಾಮಗಳು ಬಾಧಿತಗೊಂಡು ೧೩೬ ಗ್ರಾಮಗಳು ಸಂಪೂರ್ಣ ಮುಳುಗಡೆ ಹೊಂದಿ ೪ ಲಕ್ಷ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಅಖಂಡ ವಿಜಯಪುರ ಜಿಲ್ಲೆಯ ರೈತರ ಎಲ್ಲ ಜಮೀನುಗಳಿಗೆ ನೀರು ದೊರಕುತ್ತಿಲ್ಲ. ಯುಕೆಪಿ ಸಾಕಾರಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ರೈತರು ಹಾಗೂ ಜನರು ತಮ್ಮ ಪೂರ್ವಜರಿಂದ ವಾಸವಾಗುತ್ತಾ ಬಂದಿರುವ ಮನೆ, ಜಮೀನುಗಳನ್ನು ತ್ಯಾಗ ಮಾಡಿ ಸರಕಾರ ಕೊಟ್ಟ ಜಾಗೆಯಲ್ಲಿ ಕೆಲವರು ವಾಸವಾಗಿದ್ದರೆ ಇನ್ನು ಕೆಲವರು ದಿಕ್ಕು ದಿಸೆಯಿಲ್ಲದಂತೆ ಸರ್ಕಾರ ನೀಡಿದ ಪರಿಹಾರದ ಹೆಸರಿನಲ್ಲಿ ಕೊಟ್ಟ ಪುಡಿಗಾಸನ್ನು ತೆಗೆದುಕೊಂಡು ಬೇರೆಡೆ ಗುಳೆ ಹೋಗಿದ್ದಾರೆ. ತ್ಯಾಗ ಮಾಡಿದ ಜಿಲ್ಲೆಯ ರೈತರಿಗೆ ಸ್ಕೀಂ ಎ, ಸ್ಕೀಂ ಬಿ ಹೆಸರಿನಲ್ಲಿ ನೀರಿನಿಂದ ವಂಚಿಸಲಾಗುತ್ತಿದೆ. ಇದನ್ನು ಬಗೆ ಹರಿಸಿ ಈ ಭಾಗದ ರೈತರಿಗೆ ಎನಿ ಟೈಮ್ ವಾಟರ್ ಎನ್ನುವಂತೆ ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ನೀರು ಒದಗಿಸಬೇಕು ಎಂದು ರೈತರು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಆಲಮಟ್ಟಿ ಡ್ಯಾಂನಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೆ ಜಲಾಶಯ ವ್ಯಾಪ್ತಿಯ ನಾನಾ ನೀರಾವರಿ ಯೋಜನೆ ಸೇರಿ ಒಟ್ಟು ೧.೧೬ ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಸದ್ಯ ಚಾಲ್ತಿಯಲ್ಲಿರುವ ಎಲ್ಲ ಕಾಲುವೆಗಳ ಮೂಲಕವಾಗಿ ಮುಂಗಾರು ಹಂಗಾಮಿಗೆ ೬ ಟಿಎಂಸಿ ಅಡಿ ಮತ್ತು ಹಿಂಗಾರು ಹಂಗಾಮಿಗೆ ೯ ಟಿಎಂಸಿಅಡಿ ನೀರನ್ನು ಮಾತ್ರ ನೀಡುತ್ತಿದ್ದಾರೆ.
ಜಿಲ್ಲೆಯ ಎಲ್ಲ ಕಾಲುವೆಗಳಿಗೆ ಏಕಕಾಲಕ್ಕೆ ಯಾವುದೇ ಹಂತಗಳ ನೆಪ ಹೇಳದೆ ರೈತರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ನೀರು ಹರಿಸಬೇಕು ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಿ ಕೊಡಲು ರಾಜ್ಯ ಸರ್ಕಾರ ಅವಳಿ ಜಲಾಶಯಗಳ ಮಧ್ಯೆ ನೀರು ಮರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಸಗರ, ನಿಂಗರಾಜ ಆಲೂರ, ಸೋಮು ಬಿರಾದಾರ, ಸೀತಪ್ಪ ಗಣಿ ಮಾತನಾಡಿದರು.
ವಿಠ್ಠಲ ಬಿರಾದಾರ, ಸದಾಶಿವ ಬರಟಗಿ, ಬಾಲಪ್ರಸಾದ ಲಿಂಗದಳ್ಳಿ, ರವಿ ಕೋತಿನ, ಜಿ.ಬಿ.ಪಡಸಲಗಿ, ಹೊನಕೇರಪ್ಪ ತೆಲಗಿ, ಶಿವಪ್ಪ ಪಾಟೀಲ, ವಿಜಯಕುಮಾರ ಚಿನಿವಾಲರ, ಸಾಬಣ್ಣ ಅಂಗಡಿ, ಶಿವಪ್ಪ ಪಾಟೀಲ, ಬಸವರಾಜ ಮಾಡಿಹಾಳ, ಬೀರಪ್ಪ ಬಳ್ಳಾಪುರ, ಇಬ್ರಾಹಿಂ ಕಮತಗಿ, ರಾಮನಗೌಡ ಪಾಟೀಲ, ಮಹದೇವಪ್ಪ ತೇಲಿ, ದಾವಲಸಾಬ ನದಾಫ್ ಇತರರಿದ್ದರು.
Subscribe to Updates
Get the latest creative news from FooBar about art, design and business.
ಕೃಷ್ಣಾ ನದಿ ನೀರು ಮರು ಹಂಚಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
Related Posts
Add A Comment

