ಸಿಂದಗಿಯಲ್ಲಿ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನ ಉದ್ಘಾಟನೆ
ಸಿಂದಗಿ: ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಿದೆ, ಹೀಗಾಗಿ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಬೇಡಿಕೆಗಳು ಬೇಗ ಈಡೇರಲಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಆಶಾ ಕಾರ್ಯಕರ್ತೆಯರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಸೇವೆ ಇನ್ನಷ್ಟು ಉತ್ತಮವಾಗಿ ಜನರಿಗೆ ತಲುಪಲು ಸಹಕಾರಿಯಾಗಲಿ ಎಂದರು.
ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಟಿ.ಮಲ್ಲಿಕಾರ್ಜುನ ಮಾತನಾಡಿ, ಆಶಾ ಕಾರ್ಯಕರ್ತೆಯರು ಯಾವುದೋ ಪಿಎಚ್‌ಸಿಯ ಆಧಾರ ಸ್ಥಂಭವಾಗದೇ ಅವರು ಇಡೀ ರಾಜ್ಯದ ಆರೋಗ್ಯ ಇಲಾಖೆಯ ಆಧಾರ ಸ್ತಂಭವಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣವನೊತ್ತೆಯಿಟ್ಟು ಸೇವೆ ಸಲ್ಲಿಸಿದ್ದಾರೆ, ಅಲ್ಲದೇ ಆಶಾ ಕಾರ್ಯಕರ್ತೆಯರು ಬಂದ ಮೇಲೆ ಸಮಾಜದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಸಾವು ಗಣನೀಯ ಇಳಿಕೆ ಕಂಡು ಬಂದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ನಮ್ಮ ಸರಕಾರಗಳು ಸೂಕ್ತ ಸಂಬಳ ನೀಡುತ್ತಿಲ್ಲ. ಇದುವರೆಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕಾರ್ಮಿಕರಿಗೆ ದ್ರೋಹ ಬಗೆಯುತ್ತಲೇ ಬಂದಿವೆ. ಯಾವ ಸರಕಾರಗಳು ಸಹ ಇಂದು ಕಾರ್ಮಿಕರ ಹಿತಾಸಕ್ತಿ ಕಾಪಾಡುತ್ತಿಲ್ಲ. ಹಾಗಾಗಿ ನಮಗೆಲ್ಲಾ ಉಳಿದಿರುವುದು ಹೋರಾಟದ ದಾರಿ ಒಂದೇ ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷೆ ರೇಣುಕಾ ಕಲಕುಟಗೇರ ವಹಿಸಿದ್ದರು. ಸಮ್ಮೇಳನದ ಆರಂಭದಲ್ಲಿ ಎ.ಐ.ಯು.ಟಿ.ಯು.ಸಿ.ಯ ಸಂಸ್ಥಾಪನಾಧ್ಯಕ್ಷ ಕಾಮ್ರೇಡ್ ಶಿವದಾಸ್ ಘೋಷ್‌ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮತ್ತು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮ್ಮೇಳನದ ಕೊನೆಯಲ್ಲಿ ನೂತನ ತಾಲೂಕು ಸಮಿತಿ ರಚನೆಯಾಯಿತು. ಅಧ್ಯಕ್ಷರನ್ನಾಗಿ ಜ್ಯೋತಿ ಶಾಬಾದಿ, ಉಪಾದ್ಯಕ್ಷರನ್ನಾಗಿ ಮಹಾನಂದ, ನಾಗಮ್ಮ, ಜಗದೇವಿ, ರೇಣುಕಾ ಹೊಸಮನಿ, ಯಮನವ್ವ. ಕಾರ್ಯದರ್ಶಿಯಾಗಿ ಮೈರುನ್ನಿಸಾ ಜಂಟಿ ಕಾರ್ಯದರ್ಶಿ ರೂಪಾ ಅಲಮೇಲ, ಅಂಬುಬಾಯಿ, ಅನಸುಬಾಯಿ ರೇಣುಕಾ ಕನ್ನೋಳ್ಳಿ ಹಾಗು ಸಮಿತಿಯ ಸದಸ್ಯರುಗಳಾಗಿ ತುಳಸಿ, ಕವಿತಾ, ಲಕ್ಮೀ, ವಿಜಯಲಕ್ಷ್ಮೀ, ಮಹಾದೇವಿ, ಸರಸ್ವತಿ, ಕನ್ಯಾಕುಮಾರಿ ಫಾತಿಮಾ ಶೆಖ್ , ಶೋಭಾ,ಬಸಮ್ಮ, ಸುನಂದ, ಬೋರಮ್ಮ, ರೇಣುಕಾ, ಭಾರತಿ, ನಾಗರತ್ನ, ಮಲ್ಲಮ್ಮ, ಶಂಕ್ರಮ್ಮ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಆಶಾ ಸಂಘಟನೆಯ ಜಿಲ್ಲಾ ಮುಖಂಡ ಹೆಚ್.ಟಿ.ಭರತಕುಮಾರ ಸೇರಿದಂತೆ ಅನೇಕರಿದ್ದರು.
” ಶ್ರೀಮಂತರು ಶ್ರೀಮಂತರಾಗುವ ಮತ್ತು ಬಡವರು ಬಡವರಾಗುವ ಈ ವ್ಯವಸ್ಥೆ ಬದಲಾಗಬೇಕು. ಬಂಡವಾಳಶಾಹಿಗಳ ಅಟ್ಟಹಾಸ ನಿಲ್ಲಿಸಬೇಕು. ನಮ್ಮ ಹೋರಾಟಗಳು ಸಾಮಾಜದಲ್ಲಿನ ಮೂಲಭೂತ ಬದಲಾವಣೆಗೆ ಪೂರಕವಾಗಲಿ, ಕಾರ್ಮಿಕರ ಹಿತ ಕಾಪಾಡುವ ರಾಜ್ಯ ಸ್ಥಾಪನೆಯಾಗಲಿ, ಕೇವಲ ಪ್ರಶಂಸೆಗೆ ಮರುಳಾಗದೇ ಒಂದಾಗಿ ಹೋರಾಡಿ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ.”
– ಎಚ್.ಜಿ.ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷರು

