ಮುದ್ದೇಬಿಹಾಳ: ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದ ಮಹಿಳಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಶನಿವಾರ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಹಾಗೂ ಭಾರತೀಯ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಂದು ದಿನದ ಹೊರ ರೋಗಿಗಳ ಸೇವೆ (ಓಪಿಡಿ) ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.
ಅಗತ್ಯ ತುರ್ತು ಸೇವೆಗಳನ್ನು ಒದಗಿಸುವ ಮೂಲಕ ಇನ್ನುಳಿದ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಎಲ್ಲ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯಲ್ಲಿನ ಎಲ್ಲ ಸಿಬ್ಬಂದಿ ವರ್ಗದವರು ಸಾಥ್ ನೀಡಿದರು. ಸಾರ್ವಜನಿಕರಿಗೆ ಅಗತ್ಯ ಸೇವೆಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕು ಆಡಳಿತ ವೈದ್ಯಾಧಿಕಾರಿ ಅನೀಲಕುಮಾರ ಶೇಗುಣಸಿ ಮಾತನಾಡಿ, ಘಟನೆಯನ್ನು ಅತ್ಯಂತ ಗಂಭೀರವಾಗಿ ಖಂಡಿಸುತ್ತೇವೆ. ಸಾರ್ವಜನಿಕರ ತಿಳಿವಳಿಕೆಗೋಸ್ಕರ ಓಪಿಡಿಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುತ್ತಿದೆ. ದೇಶದಲ್ಲಿ ವೈದ್ಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಕಠಿಣ ಕಾನೂನುಗಳು ಜಾರಿಗೆ ಬರಬೇಕಾಗಿದೆ. ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಡಾ. ಹಸನಡೊಂಗ್ರಿ ಬೀಳಗಿ ಮಾತನಾಡಿ, ತುರ್ತು ಸೇವೆಗಳನ್ನು ಒದಗಿಸುವ ಮೂಲಕ ಈ ಪ್ರತಿಭಟನೆಗೆ ಬೆಂಬಲಿಸುತ್ತಿದ್ದೇವೆ. ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಭದ್ರತೆ ಒದಗಿಸಬೇಕು ಎಂದರು.
ಶುಶ್ರೂಷಾಧಿಕಾರಿ ಲಕ್ಷ್ಮಿ ಎ. ಮಾತನಾಡಿ,ಹೆಣ್ಣಿಗೆ ಎಲ್ಲ ರಂಗದಲ್ಲೂ ಭದ್ರತೆ ಒದಗಿಸಬೇಕು. ಇಂತಹ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂಥದ್ದು. ಈ ಕೃತ್ಯ ಮಾಡಿದವರನ್ನು ಆದಷ್ಟು ಬೇಗ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಹಿರಿಯ ಶುಶ್ರುಷಕ ಅಧಿಕಾರಿ ಬಸಮ್ಮ ಸಾರವಾಡ, ಸಂಜಯ ಭೋಸಲೆ, ಶಿವಣ್ಣ ಮಾಗಿ, ಮಹಮ್ಮದ ರಫೀಕ ಬಾಗವಾನ, ರಾಜಶ್ರೀ ಅಲಗುಂಡಿ, ನಶ್ರೀನ ಮುಲ್ಲಾ, ಅಬ್ದುಲಹಮೀದ ಹಳಿಯಾಳ, ಶಿವಕುಮಾರ ಬಂಡ್ರೋಳಿ, ಡಾ. ಎಚ್.ಎಚ್.ಚವ್ಹಾಣ, ರೇಖಾ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

