ತಿಕೋಟಾ: ಸುಧೀರ್ಘ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿಯೊಬ್ಬರು ತಾವು ಸೇವೆ ಸಲ್ಲಿಸಿದ ಶಾಲೆಗೆ ₹50 ಸಾವಿರ ದೇಣಿಗೆ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸವಿತಾ ಹತ್ತಿಕಾಳ ಎಂಬ ಶಿಕ್ಷಕಿ ಇತ್ತೀಚೆಗೆ ಹೊನವಾಡ ಕೆಜಿಎಸ್ ಶಾಲೆಗೆ ವರ್ಗಾವಣೆ ಹೊಂದಿದ್ದು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ, ಗ್ರಾಮದ ಹಿರಿಯರ ಹಾಗೂ ಎಸ್ಡಿಎಂಸಿ ಸಮ್ಮುಖದಲ್ಲಿ ಶಾಲೆಗೆ 50 ಸಾವಿರ ದೇಣಿಗೆ ಹಣ ನೀಡಿ ಮಕ್ಕಳನ್ನು ಕಂಡು ಭಾವುಕರಾದರು.
ದೇಣಿಗೆ ನೀಡಿದ ₹ 50 ಸಾವಿರ ಹಣವನ್ನು ಎಸ್ಡಿಎಂಸಿ ಹಾಗೂ ಮುಖ್ಯಗುರುಗಳ ಜಂಟಿ ಖಾತೆಯಲ್ಲಿ ಠೇವಣಿ ಇಟ್ಟು ಅದರಿಂದ ಪ್ರತಿ ವರ್ಷ ಬರುವ ಬಡ್ಡಿ ಹಣದಲ್ಲಿ ಐದನೇ, ಆರನೇ ಹಾಗೂ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವೃತ್ತಿ ಬದುಕಿನಲ್ಲಿ ಗ್ರಾಮಸ್ಥರ ಸಹಕಾರ ಪ್ರೀತಿ ನೆನೆದು ಭಾವುಕರಾದ ಶಿಕ್ಷಕಿ ಹತ್ತಿಕಾಳ ಗ್ರಾಮದ ಋಣ ತಿರಿಸಲು ಸಾಧ್ಯವಿಲ್ಲ. ಭಾವಿ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೆಚ್ಚಿನ ಶಿಕ್ಷಕಿಯ ವರ್ಗಾವಣೆ ನೆನೆದು ವಿಧ್ಯಾರ್ಥಿಗಳು ಕಣ್ಣಿರು ಹಾಕಿದರು. ಮಕ್ಕಳಿಗೆ ಸಮಾಧಾನ ಪಡಿಸುತ್ತಾ ಶಿಕ್ಷಕಿ ಎಲ್ಲ ವಿಧ್ಯಾರ್ಥಿಗಳು ಚನ್ನಾಗಿ ಓದಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಬೇಕು ಎಂದು ಶುಭ ಹಾರೈಸಿದರು.
ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಯಾಕುಬ ಜತ್ತಿ, ಆರ್.ಎಸ್.ಬಜಂತ್ರಿ, ಮೈಬೂಬ ಜತ್ತಿ, ಪೈಗಂಬರ ಜತ್ತಿ, ಬಸವರಾಜ ನಿಡೋಣಿ, ಶ್ರೀಕಾಂತ ರಾಠೋಡ, ಎಸ್ಡಿಎಂಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
ಸೇವೆ ಸಲ್ಲಿಸಿದ ಶಾಲೆಗೆ ರೂ.50 ಸಾವಿರ ದೇಣಿಗೆ ನೀಡಿದ ಶಿಕ್ಷಕಿ
Related Posts
Add A Comment

