ದೇವರಹಿಪ್ಪರಗಿ: ಯೋಧರ ಹಾಗೂ ಶೈಕ್ಷಣಿಕ ರಂಗದ ಸಾಧಕರ ಸನ್ಮಾನ ಮಕ್ಕಳ ಸ್ಪೂರ್ತಿಗೆ ಕಾರಣವಾಗಬಲ್ಲದು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ನಮ್ಮೆಲ್ಲರ ರಾಷ್ಟ್ರೀಯ ಹಬ್ಬ ಇದರಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ಅಗತ್ಯ. ನಮ್ಮ ದೇಶದ ಗಡಿಕಾಯುವ ಯೋಧರು ಹಾಗೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರು ನಮಗೆ ಹಾಗೂ ಮುಂದಿನ ಪೀಳಿಗೆಗೆ ಆದರ್ಶವಾಗಬಲ್ಲರು ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ತ್ಯಾಗ ಬಲಿದಾನಗೈದ ಸ್ವಾತಂತ್ರ್ಯವೀರರನ್ನು ನೆನೆಯೋಣ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ನಿವೃತ್ತ ಯೋಧರು ಹಾಗೂ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣ ಪಂಚಾಯಿತಿ ಧ್ವಜಾರೋಹಣ ಹಾಗೂ ತಾಲ್ಲೂಕಾಡಳಿತದ ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಒಬ್ಬ ಮಹಿಳಾ ಅಭ್ಯರ್ಥಿಯ ಹೊರತಾಗಿ ಯಾವ ಮಹಿಳಾ ಸದಸ್ಯರು ಭಾಗವಹಿಸದೇ ಇದ್ದು ಅವರ ಜಾಗೆಯಲ್ಲಿ ಸಂಬಂಧಿಗಳು ಭಾಗವಹಿಸಿದ್ದು ಎದ್ದು ಕಂಡಿತು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಪಿ.ಎಸ್.ಐ ಬಿ.ಎ.ತಿಪರಡ್ಡಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಯಂಕಂಚಿ, ಪಟ್ಟಣ ಪಂಚಾಯಿತಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಶಿಕ್ಷಕ ಸಮುದಾಯ, ಪಟ್ಟಣದ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

