ಸ್ವಾತಂತ್ರ್ಯ ಹಬ್ಬಕ್ಕೆ ಮೇಘ ಸಿಂಚನ | ಮಳೆಯಲ್ಲೂ ತಿರಂಗಾ ಕಳೆ ಸಂಭ್ರಮ
ಚಿಕ್ಕಪಡಸಲಗಿ: ಅಗಸ್ಟ್ 15 ದೇಶವಾಸಿಗಳಿಗೆ ಮಹತ್ವದ ದಿನ. ಬ್ರಿಟಿಷ್ ರ ಕಪಿಮುಷ್ಟಿಯಿಂದ ಮುಕ್ತವಾದ ಈ ವಿಶೇಷ ದಿನದಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸುಕ್ಷಣ.ಆ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಡಗರ, ಸಂಭ್ರಮ ! ಅಂತೆಯೇ ಈ ಸವಿದಿನ ಅರ್ಥವೆತ್ತಾಗಿ ಆಚರಿಸುವುದಕ್ಕಾಗಿ ಭಾಗಶಃ ಕಾರ್ಯಕ್ರಮದ ಪೂರ್ವ ತಯಾರಿಗಳೆಲ್ಲ 14 ರಂದೇ ಇಲ್ಲಿನ ಶಾಲಾ,ಕಾಲೇಜುಗಳ ಮುಖ್ಯಸ್ಥರು ಮಾಡಿಕೊಂಡು ಸನ್ನದ್ಧ ಸ್ಥಿತಿಯಲ್ಲಿದ್ದರು. ಆದರೆ 15 ರ ತಡರಾತ್ರಿ ವರುಣದೇವ ಧರೆಗಾಗಮಿಸಿ ಅಸ್ತವ್ಯಸ್ತತೆಗೆ ಕಾರಣವಾಗುವಂತೆ ಆತಂಕ ಸೃಷ್ಟಿಸಿದ.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಮುನ್ನಾದಿನ ಬುಧವಾರ ಶಾಲಾಂಗಳ ಶುಚಿಗೊಳಿಸಿ ಸುಣ್ಣದ ಮಾಕಿ೯ಂಗ್ ಲೇನ್ ಔಟ್ ಹಾಕಲಾಗಿತ್ತು. ಭಾರತ ನಕ್ಷೆ ಚಿತ್ರಕ್ಕೆ ತ್ರಿವರ್ಣ ಬಣ್ಣದ ಹಾಗೂ ಶಾಲಾವರಣದ ರಸ್ತೆ ಅಕ್ಕಪಕ್ಕದಲ್ಲಿ ರಂಗೋಲಿ ಚಿತ್ತಾರ ಮೂಡಿದ್ದವು ಆದರೆ 15 ರ ಮಧ್ಯರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ಅವೆಲ್ಲವೂ ನೀರಿಗೆ ಹೋಮವಾದವು. ಬೆಳಿಗ್ಗೆ ಶಾಲಾ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಆಗಮಿಸಿ ನೋಡಿದಾಗ ಕಲರ್ಸ ರಂಗೋಲಿ ಮಾಯವಾಗಿದ್ದನ್ನು ಕಂಡು ಬೆರಗಾದರು. ಪುನಃ ಅಲ್ಪಾವಧಿಯ ಸಮಯದಲ್ಲೇ ಬಣ್ಞ ಬಣ್ಣದ ರಂಗೋಲಿ ಹಾಕಿ ಮತ್ತೆ ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ನೆಲವನ್ನು ರಂಗೋಲಿ ಕಲರದಿಂದ ಅಣಿಗೊಳಿಸಿ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಧೋ ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಗ ಪುನಃ ನೆಲದ ಮೇಲಿನ ಚಿತ್ತಾಕರ್ಷಕ ಸಿಂಗಾರ ಮಾಯವಾಗಿ ತಣ್ಣೀರೆರಚಿತು.
ಸ್ವಲ್ಪ ಸಮಯದ ಬಳಿಕ ಮಳೆ ರಭಸ ಕ್ಷೀಣಿಸಿತು. ಜಿನುಗು ಮಳೆಹನಿಗಳ ಮಧ್ಯೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಕ್ಕಳು ಮಳೆ ಉತ್ಸಾಹದಲ್ಲೇ ಮಿನಗಿದರು. ದೇಶಾಭಿಮಾನ ಮೆರೆದರು.
77 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಶಾಲಾ ಆಡಳಿತ ಮಂಡಳಿ ಸದಸ್ಯ ಶಿವಪ್ಪ ಹೊನ್ನಪ್ಪ ಜಕನೂರ ಮಾತನಾಡಿದರು.
ರಾಷ್ಟ್ರ ಧ್ವಜಾರೋಹಣ ಶಾಲಾ ಸ್ಥಾನಿಕ ಆಡಳಿತ ಹಿರಿಯ ಸದಸ್ಯರಾದ ರಾಮಪ್ಪ ದುಂಡಪ್ರ ಸನಾಳ ನೆರವೇರಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪುರ, ಈರಣ್ಣ ದೇಸಾಯಿ, ಲೋಹಿತ ಮಿಜಿ೯, ಕುಮಾರ ವಾಣಿ, ಜಿ.ಆರ್.ಜಾಧವ ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಅಕ್ಷತಾ ಮೂತ್ತೂರ ಸೇರಿದಂತೆ ಗ್ರಾಮದ ಪ್ರಮುಖರಿದ್ದರು. ಸುರೇಶ ಸಂತಿ ಸ್ವಾಗತಿಸಿದರು. ಸದಾಶಿವ ಸಿದ್ದಾಪುರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳ ಪ್ರಭಾತ ಪೇರಿ ಸಂಚರಿಸಿತು. ವಿವಿಧ ಶಾಲೆಗಳ ಶಿಕ್ಷಕ ಸಮೂಹ ಮಕ್ಕಳ ಜೊತೆಯಲ್ಲಿ ಹೆಜ್ಜೆ ಹಾಕಿದರು.

