ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠವು ಶ್ರೀಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಈ ವರ್ಷದಿಂದ ಗುರು ಮಹಾಂತೇಶ್ವರಶ್ರೀ ಪ್ರಶಸ್ತಿ ನೀಡಲು ಮುಂದಾಗಿದ್ದು. ಈ ವರ್ಷದ ಪ್ರಶಸ್ತಿಗೆ ವಿಜಯಪುರದ ಹಿರಿಯ ಸಾಹಿತಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಎಂ.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ೧೧ ಸಾವಿರ ನಗದು, ಕಂಚಿನ ಪ್ರಶಸ್ತಿ, ನೆನಪಿನ ಕಾಣಿಕೆ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಏ.೨೦ ರಂದು ಬೆಳಗ್ಗೆ ೧೧ ಗಂಟೆಗೆ ಶ್ರೀಮಠದಲ್ಲಿ ನಡೆಯುವ ಶ್ರೀಗುರು ಮಹಾಂತೇಶ್ವರರ ೭೪ ನೇ ಯಾತ್ರಾ ಮಹೋತ್ಸವ ಹಾಗೂ ಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಗಳ ೨೨ ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ೪೦ ಜನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ಸು.೨ ಸಾವಿರ ಬೆಲೆ ಬಾಳುವ ಬ್ಯಾಗ್, ನೋಟ್‌ಪುಸ್ತಕ ಮೊದಲಾದ ಪಠ್ಯಪರಿಕರಗಳನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಲಾಗುತ್ತಿದೆ ಎಂದು ಪಟ್ಟಿಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.