ಚಡಚಣ: ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್.ಎನ್.ಹತ್ತಳ್ಳಿ ಹೇಳಿದರು.
ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೮ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸುವಂತಾಗಬೇಕು ಎಂದರು.
ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ ಮಾತನಾಡುತ್ತ,ಭಾರತ ಸ್ವಾತಂತ್ರ್ಯ ಕ್ಕಾಗಿ ಲಕ್ಷಾಂತರ ಮಂದಿ ದೇಶ ಭಕ್ತರು, ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ೨೦೦ ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು ಎಂದರು.
ಈ ವೇಳೆ ವಿದ್ಯಾರ್ಥಿಗಳು ಭಾರತ ಮಾತೆ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿಕೊಂಡು,ದೇಶಭಕ್ತಿ ಹಾಡು, ನೃತ್ಯ ಹಾಗೂ ಭಾಷಣಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಹ ಶಿಕ್ಷಕ ಸಿಬ್ಬಂದಿ ವರ್ಗ, ಗ್ರಾಪಂ ಅಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

